ಕೇವಲ ಸಹ-ಆರೋಪಿಯ ಹೇಳಿಕೆ ಆಧಾರವಾಗಿ ಕೇಸ್ ದಾಖಲಿಸೋ ಹಾಗಿಲ್ಲ: ಉಡುಪಿ ಯುವಕನ ಮೇಲಿದ್ದ ಎಫ್‌ಐಆರ್ ರದ್ದು
ಸ್ವತಂತ್ರ ಹಾಗೂ ಪೂರಕ ಸಾಕ್ಷ್ಯಾಧಾರಗಳಿಲ್ಲದೆ, ಕೇವಲ ಸಹ-ಆರೋಪಿ ನೀಡಿದ ಸ್ವಯಂಪ್ರೇರಿತ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಯಾವುದೇ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ನಡಾವಳಿಗಳನ್ನು ಮುಂದುವರಿಸುವುದು ಕಾನೂನಿನ ದುರುಪಯೋಗ ಎಂದು ಕರ್ನಾಟಕ ಉನ್ನತ ನ್ಯಾಯಾಲಯ ಪ್ರಮುಖ ತೀರ್ಪು ನೀಡಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಜಾನುವಾರು ಹತ್ಯೆ ತಡೆ ಕಾಯ್ದೆ ಹಾಗೂ ಐಪಿಸಿ ಪ್ರಕರಣಕ್ಕೆ (C.C. No.109/2024) ಸಂಬಂಧಿಸಿದಂತೆ 7ನೇ ಆರೋಪಿ ಮೊಹಮ್ಮದ್ ಸಿಯಾಬ್ ಪರ ವಕೀಲರಾದ ಮೊಹಮ್ಮದ್ ಅನ್ವರ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಅರ್ಜಿದಾರನ ವಿರುದ್ಧದ ವಿಚಾರಣಾ ನಡಾವಳಿಗಳನ್ನು ರದ್ದುಗೊಳಿಸಿ ಆದೇಶಿಸಿದೆ.

ಪ್ರಕರಣದ ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರಾದ ಶ್ರೀ ಮಹಮ್ಮದ್ ಅನ್ವರ್ ಅವರು, 1 ರಿಂದ 4 ನೇ ಆರೋಪಿಗಳು ನೀಡಿದ ಸ್ವಯಂಪ್ರೇರಿತ ಹೇಳಿಕೆಗಳನ್ನು ಹೊರತುಪಡಿಸಿ ಅರ್ಜಿದಾರರನ್ನು ಅಪರಾಧಕ್ಕೆ ಜೋಡಿಸುವ ಯಾವುದೇ ಸ್ವತಂತ್ರ ಸಾಕ್ಷ್ಯಾಧಾರಗಳಿಲ್ಲ ಎಂದು ಪೀಠದ ಗಮನಕ್ಕೆ ತಂದರು. ಹೈಕೋರ್ಟ್ ನಿರ್ದೇಶನದಂತೆ ಪ್ರಾಸಿಕ್ಯೂಷನ್ ಸಹ ಪರಿಶೀಲಿಸಿ, ಅರ್ಜಿದಾರರ ವಿರುದ್ಧ ಬೇರೆ ಯಾವುದೇ ಪೂರಕ ಸಾಕ್ಷ್ಯಗಳಿಲ್ಲ ಎಂಬುದನ್ನು ಒಪ್ಪಿಕೊಂಡಿತು. ಸುಪ್ರೀಂ ಕೋರ್ಟ್‌ನ ‘ಪ್ರೇಮ್ ಪ್ರಕಾಶ್’ ಹಾಗೂ ‘ಕರಣ್ ತಲ್ವಾರ್’ ಪ್ರಕರಣಗಳ ಪ್ರಮುಖ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು, ಸಹ-ಆರೋಪಿಯ ತಪ್ಪೊಪ್ಪಿಗೆ ಹೇಳಿಕೆಯು ಮತ್ತೊಬ್ಬ ಆರೋಪಿಯ ವಿರುದ್ಧ ಸ್ವತಂತ್ರ ಸಾಕ್ಷ್ಯವಾಗುವುದಿಲ್ಲ ಮತ್ತು ವಿಚಾರಣೆಗೆ ಒಳಪಡಿಸಲು ಪೂರಕ ಸಾಕ್ಷ್ಯಾಧಾರಗಳ ಉಪಸ್ಥಿತಿ ಕಡ್ಡಾಯ ಎಂದು ಸ್ಪಷ್ಟಪಡಿಸಿದರು.
ಪ್ರಕರಣದ ವಿವರ: Criminal Petition No. 9149 of 2026 (NC: 2026:KHC:42566 | CNR: KAHC010428582026)

