Ur Kannada News

ಕಾಂಗ್ರೆಸ್‌ನ ವ್ಯಾಪ್ತಿ: ಕರಾವಳಿಯಿಂದ ಕ್ರಾಂತಿಗೆ ನಿಂತ ಡಿ.ಕೆ.ಶಿಯ ಹೊಸ ರಾಜಕೀಯ ನಡೆ

ಕರ್ನಾಟಕದ ದಶಕಗಳ ರಾಜಕೀಯ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸಂಘಟನಾ ಕೌಶಲ್ಯ ಮತ್ತು ರಾಜಕೀಯ ತಂತ್ರಗಾರಿಕೆಗೆ ಹೆಸರುವಾಸಿಯಾದ ನಾಯಕರಲ್ಲಿ ಎಚ್.ಡಿ. ದೇವೇಗೌಡರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಆದರೆ, ದೇವೇಗೌಡರ ಆಡಳಿತಾವಧಿಯ ನಂತರ ರಾಜ್ಯ ರಾಜಕಾರಣದಲ್ಲಿ ಗ್ರೌಂಡ್ ಲೆವೆಲ್‌ನಲ್ಲಿ ಇಳಿದು ಪರಿಸ್ಥಿತಿಯನ್ನು ಬಲವಾಗಿ ತಮ್ಮತ್ತ ಪಲ್ಲಟಗೊಳಿಸಬಲ್ಲ ಅಷ್ಟೇ ಪ್ರಬಲ ಮತ್ತು ಚಾಣಾಕ್ಷ ನಾಯಕ ಎಂದರೆ ಅದು ಡಿ.ಕೆ. ಶಿವಕುಮಾರ್ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ದೇವೇಗೌಡರು ಪ್ರಧಾನಮಂತ್ರಿಯ ಮಟ್ಟಕ್ಕೇರಿದರೂ ಅವರ ನಾಯಕತ್ವದ ಆಧಾರ ಮುಖ್ಯವಾಗಿ ಹಳೆಯ ಮೈಸೂರು ಭಾಗದ ಒಕ್ಕಲಿಗ ಬೆಲ್ಟ್‌ಗಷ್ಟೇ ಸೀಮಿತವಾಯಿತು. ಆದರೆ ಡಿ.ಕೆ.ಶಿಗೆ ಇರುವ ದೊಡ್ಡ ಶಕ್ತಿಯೆಂದರೆ ಇಡೀ ರಾಜ್ಯವನ್ನು ಆವರಿಸಿಕೊಂಡಿರುವ ಕಾಂಗ್ರೆಸ್ ಎಂಬ ಬೃಹತ್ ಪಕ್ಷದ ಬೆಂಬಲ. ಹೀಗಾಗಿ, ಕರಾವಳಿಯ ಮಂಗಳೂರು ಸಂಪುಟ ಸಭೆಯಿಂದ ಹಿಡಿದು ಇಡೀ ರಾಜ್ಯದಾದ್ಯಂತ ಡಿ.ಕೆ.ಶಿಯ ರಾಜಕೀಯ ನಡೆಗಳು ಅತ್ಯಂತ ಪ್ರಬುದ್ಧವಾಗಿ ಮತ್ತು ವಿಸ್ತಾರವಾಗಿ ಕಾಣುತ್ತಿದ್ದು, ಅವರು ರಾಜ್ಯ ರಾಜಕಾರಣದಲ್ಲಿ ದೇವೇಗೌಡರಿಗಿಂತ ಹೆಚ್ಚಿನ ರೇಂಜ್ ಮತ್ತು ಸುದೀರ್ಘ ಸಮಯವನ್ನು ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಹಿರಿಯ ನಾಯಕರ ಮಾರ್ಗದರ್ಶನದಲ್ಲೇ ಪಳಗಿದ್ದರೂ ಡಿ.ಕೆ. ಶಿವಕುಮಾರ್ ಅವರದ್ದು ಸಂಪೂರ್ಣ ಸ್ವತಂತ್ರ ಹಾಗೂ ಪ್ರಬುದ್ಧ ಆಡಳಿತ ಶೈಲಿ. ಮಾಜಿ ಸಿಎಂ ಎಸ್. ಬಂಗಾರಪ್ಪ ಅವರ ಗರಡಿಯಲ್ಲಿ ಬೆಳೆದರೂ ಅವರಂತೆ ಮುಖ ಗಂಟಿಕ್ಕಿಕೊಂಡು ಓವರ್ ಸ್ಪೀಡ್ ಆಡಳಿತ ನಡೆಸುವ ಸಾಹಸಕ್ಕೆ ಇವರು ಕೈಹಾಕುತ್ತಿಲ್ಲ. ಎಸ್.ಎಂ. ಕೃಷ್ಣ ಅವರ ರಾಜತಾಂತ್ರಿಕತೆಯನ್ನು ಬಲ್ಲವರಾಗಿದ್ದರೂ ಸಂಪೂರ್ಣ ‘ಫಾರಿನ್ ಮೈಂಡ್’ ತರಹದ ಶೈಲಿಗೆ ಸೀಮಿತವಾಗದೆ ಗ್ರಾಮೀಣ ಹಾಗೂ ಗ್ರೌಂಡ್ ರಿಯಾಲಿಟಿಗೆ ಹತ್ತಿರವಾಗಿದ್ದಾರೆ. ಇನ್ನು ಬಿ.ಎಸ್. ಯಡಿಯೂರಪ್ಪ ಅವರಂತೆ ಶೀಘ್ರವಾಗಿ ಶತ್ರುಗಳನ್ನು ಸೃಷ್ಟಿಸಿಕೊಳ್ಳದೆ, ಅತ್ಯಂತ ನಯ-ನಾಜೂಕಿನಿಂದ ರಾಜಕೀಯವನ್ನು ಮುನ್ನಡೆಸುತ್ತಿದ್ದಾರೆ. ತಮ್ಮ ಆಡಳಿತ ಅಥವಾ ತಂತ್ರಗಾರಿಕೆಗೆ ಕಾಟ ಕೊಡಲು ಬರುವ ಸ್ವಪಕ್ಷೀಯ ಹಾಗೂ ವಿಪಕ್ಷೀಯ ನಾಯಕರನ್ನು ‘ರೇಷ್ಮೆ ಶಾಲು ಹೊದೆಸಿ ಚಪ್ಪಲಿಯಿಂದ ಮೆಲ್ಲಗೆ ಸವರುವ’ ರೀತಿಯಲ್ಲೇ ರಾಜಕೀಯವಾಗಿ ಮೌನವಾಗಿಸುವ ಚಾಣಾಕ್ಷ ತಂತ್ರ ಇವರಿಗೆ ಕರಗತವಾಗಿದೆ.

ಇದರ ಜೊತೆಗೇ, ಕೇಂದ್ರ ಸರ್ಕಾರದ ಹಿಡಿತದಲ್ಲಿರುವ ವಿವಿಧ ತನಿಖಾ ಸಂಸ್ಥೆಗಳ ತೀವ್ರ ಒತ್ತಡ ಹಾಗೂ ಪ್ರೆಷರ್ ಗೇಮ್‌ಗಳನ್ನು ತಾಳಿಕೊಂಡು ಹೇಗೆ ಆಡಳಿತ ನಡೆಸಬಹುದು ಎಂಬುದಕ್ಕೆ ಇಡೀ ದೇಶಕ್ಕೇ ಡಿ.ಕೆ.ಶಿ ಹೊಸದೊಂದು ಮಾದರಿಯನ್ನು ತೋರಿಸಿಕೊಡುತ್ತಿದ್ದಾರೆ. ದೇಶದ ಇತರ ರಾಜ್ಯಗಳಲ್ಲಿ ಸುಲಭವಾಗಿ ನಾಯಕರನ್ನು ಹೈಜಾಕ್ ಮಾಡಿದಂತೆ ಡಿ.ಕೆ.ಶಿಯ ವಿಷಯದಲ್ಲಿ ಕೇಂದ್ರಕ್ಕೆ ಸಾಧಿಸಲು ಸಾಧ್ಯವಾಗಿಲ್ಲ. ಪ್ರತಿಯೊಂದು ರಾಜಕೀಯ ದಾಳಿಗೂ ಸಿಸ್ಟಮ್ಯಾಟಿಕ್ ಆಗಿ ‘ಕೌಂಟರ್ ಅಟ್ಯಾಕ್’ ಮಾಡುವ ಸಾಮರ್ಥ್ಯ ಇರುವ ನಾಯಕ ಎಂಬುದು ಇಡೀ ದೇಶಕ್ಕೇ ತಿಳಿದಿದೆ. ರಾಜ್ಯ ರಾಜಕಾರಣದಲ್ಲಿ ಡಿ.ಕೆ.ಶಿಯ ಈ ಚಾಣಾಕ್ಷ ತಂತ್ರಗಾರಿಕೆ ಸಂಪೂರ್ಣ ಯಶಸ್ವಿಯಾದರೆ, ಅದು ಕೇಂದ್ರ ಮಟ್ಟದ ಹಲವು ರಾಜಕೀಯ ಲೆಕ್ಕಾಚಾರಗಳನ್ನು ಫೇಲ್ ಮಾಡುವುದರಲ್ಲಿ ಸಂಶಯವಿಲ್ಲ.

-Musthak Hennabail

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.

Leave a Reply

Your email address will not be published. Required fields are marked *