ರಾಜ್ಯದಲ್ಲಿ ವಕೀಲರ ಮೇಲೆ ಸರಣಿ ದಾಳಿ ಹಿನ್ನೆಲೆ: ‘ಅಡ್ವೊಕೇಟ್ಸ್ ಪ್ರೊಟೆಕ್ಷನ್ ಆಕ್ಟ್’ ತಿದ್ದುಪಡಿಗೆ ಆಗ್ರಹಿಸಿ ಬಂಟ್ವಾಳ ಬಾರ್ ಅಸೋಸಿಯೇಷನ್‌ನಿಂದ ಸಿಎಂಗೆ ಮನವಿ –ವಕೀಲರ ಸಂಘದ ಕರೆಗೆ ರಾಜ್ಯಾದ್ಯಂತ ವೃತ್ತಿಬಾಂಧವರ ಒಗ್ಗಟ್ಟು – ಐತಿಹಾಸಿಕ ಹೋರಾಟಕ್ಕೆ ಬಂಟ್ವಾಳ ವಕೀಲರಿಂದ ಪೂರ್ಣ ಬೆಂಬಲ
ಬಿ.ಸಿ. ರೋಡ್: ಕರ್ನಾಟಕ ರಾಜ್ಯದಲ್ಲಿ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ, ಕೊಲೆ ಹಾಗೂ ಬೆದರಿಕೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ವಕೀಲರ ಸುರಕ್ಷತೆಗೆ ಸಂಪೂರ್ಣ ಕಾನೂನು ರಕ್ಷಣೆ ಒದಗಿಸುವಂತೆ ಹಾಗೂ ‘ಅಡ್ವೊಕೇಟ್ಸ್ ಪ್ರೊಟೆಕ್ಷನ್ ಆಕ್ಟ್’ ಅನ್ನು ಇನ್ನಷ್ಟು ಬಲಪಡಿಸಿ, ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿಯೇ ಅಗತ್ಯ ತಿದ್ದುಪಡಿ ತರಲು ಆಗ್ರಹಿಸಿ ಬಂಟ್ವಾಳ ಬಾರ್ ಅಸೋಸಿಯೇಷನ್ ವತಿಯಿಂದ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂಬಂಧ ನಡೆದ ಬಂಟ್ವಾಳ ಬಾರ್ ಅಸೋಸಿಯೇಷನ್‌ನ ವಕೀಲರ ಸಭೆಯಲ್ಲಿ ವಕೀಲರ ವೃತ್ತಿ ಸುರಕ್ಷತೆ ಹಾಗೂ ನ್ಯಾಯಾಂಗ ವ್ಯವಸ್ಥೆಯ ಸ್ವಾತಂತ್ರ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಹಿರಿಯ ವಕೀಲರಾದ ಸುರೇಶ್ ಪೂಜಾರಿಯವರು, ವಕೀಲರ ಮೇಲೆ ನಡೆಯುವ ದಾಳಿಗಳು ಕೇವಲ ಒಬ್ಬ ವ್ಯಕ್ತಿಯ ಮೇಲಿನ ದಾಳಿಯಲ್ಲ, ಅದು ನ್ಯಾಯಾಂಗ ವ್ಯವಸ್ಥೆಯ ಸ್ವತಂತ್ರ ಕಾರ್ಯಾಚರಣೆ ಹಾಗೂ ನ್ಯಾಯ ಪಡೆಯುವ ಸಾರ್ವಜನಿಕರ ಹಕ್ಕಿನ ಮೇಲಿನ ಪ್ರಹಾರವಾಗಿದೆ ಎಂದು ಅಭಿಪ್ರಾಯಪಟ್ಟರು. ಮುಂದುವರಿದು ಮಾತನಾಡಿದ ವಕೀಲರಾದ ಜಯರಾಮ್ ರೈ, ರಮೇಶ್ ಉಪಾಧ್ಯಾಯ, ಉಮೇಶ್ ಕುಮಾರ್ ವೈ, ನರೇಂದ್ರನಾಥ ಭಂಡಾರಿ ವೀರೇಂದ್ರ ಸಿದ್ದಕಟ್ಟೆ ಅವರು, ರಾಜ್ಯದ ವಿವಿಧ ಭಾಗಗಳಲ್ಲಿ ವಕೀಲರಿಗೆ ಎದುರಾಗುತ್ತಿರುವ ಅಡಚಣೆ ಹಾಗೂ ಸಾಮಾಜಿಕ ಕಂಟಕರ ವಿರುದ್ಧ ಸರ್ಕಾರ ಪರವಾಗಿ ತಕ್ಷಣದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ವಕೀಲರಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಬಲವಾಗಿ ಆಗ್ರಹಿಸಿದರು. ಪ್ರಸ್ತುತ ಜಾರಿಯಲ್ಲಿರುವ ‘ಅಡ್ವೊಕೇಟ್ಸ್ ಪ್ರೊಟೆಕ್ಷನ್ ಆಕ್ಟ್’ ಕಾಯಿದೆಯಲ್ಲಿ ಅಗತ್ಯ ತಿದ್ದುಪಡಿ ತಂದು ಮುಂಬರುವ ಅಧಿವೇಶನದಲ್ಲೇ ಜಾರಿಗೊಳಿಸುವುದು ಹಾಗೂ ಹಲ್ಲೆ ನಡೆಸುವವರ ವಿರುದ್ಧ ಸರ್ಕಾರ ಪರವಾಗಿ ತಕ್ಷಣದ ಕಠಿಣ ಕಾನೂನು ಕ್ರಮ ಮತ್ತು ತ್ವರಿತ ತನಿಖೆ ನಡೆಸಿ ಸೂಕ್ತ ರಕ್ಷಣೆ ಕಲ್ಪಿಸುವುದು ಅಸೋಸಿಯೇಷನ್‌ನ ಮುಖ್ಯ ಬೇಡಿಕೆಗಳಾಗಿವೆ.
ಈ ಸಭೆಯಲ್ಲಿ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹಿರಿಯ ಮತ್ತು ಯುವ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ತಮ್ಮ ಪೂರ್ಣ ಪ್ರಮಾಣದ ಒಗ್ಗಟ್ಟಿನ ಬೆಂಬಲವನ್ನು ನೀಡಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮತ್ತು ಬೆಂಗಳೂರು ವಕೀಲರ ಸಂಘ ನೀಡಿದ್ದ ಕರೆಗೆ ರಾಜ್ಯದಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಇಂದು ವಕೀಲರ ಒಗ್ಗಟ್ಟಿನ ಐತಿಹಾಸಿಕ ದಿನವಾಗಿ ಮೂಡಿಬಂದಿದೆ ,ವಕೀಲರು ವೃತ್ತಿಬಾಂಧವರ ಹಕ್ಕುಗಳು, ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಒಂದಾಗಿ ಬೃಹತ್ ಪ್ರತಿಭಟನೆ ನಡೆಸಿದರು. ವಕೀಲರ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿದರು. ಈ ಬೃಹತ್ ಹೋರಾಟವು ವಕೀಲರ ಸಮುದಾಯದ ಒಗ್ಗಟ್ಟು, ಬದ್ಧತೆ ಮತ್ತು ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ವಕೀಲರ ಹಕ್ಕುಗಳು, ಸುರಕ್ಷತೆ ಹಾಗೂ ಗೌರವದ ರಕ್ಷಣೆಗಾಗಿ ಈ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಲಾಯಿತು.




