ಅಕ್ರಮ ಬಂಧನ: ಕಾರಣ ತಿಳಿಸದಿದ್ದರೆ ಪೊಲೀಸರಿಗೆ “ಇಲಾಖಾ ತನಿಖೆ” ಗ್ಯಾರಂಟಿ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಪೊಲೀಸರು ಯಾವುದೇ ವ್ಯಕ್ತಿಯನ್ನು ಬಂಧಿಸುವ ಮುನ್ನ ಬಂಧನಕ್ಕೆ ಸೂಕ್ತ ಲಿಖಿತ ಕಾರಣಗಳನ್ನು ಒದಗಿಸದಿದ್ದರೆ, ಅಂತಹ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ಎದುರಿಸುವುದು ಕಡ್ಡಾಯವಾಗಲಿದೆ ಎಂದು ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ತೀರ್ಪೊಂದನ್ನು ನೀಡಿದೆ. ನ್ಯಾಯಮೂರ್ತಿಗಳಾದ ಉಜ್ಜಲ್ ಎಸ್. ಭುಯಾನ್ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠವು ಜಸ್ಕರನ್ಜಿತ್ ಸಿಂಗ್ ವಿರುದ್ಧ ಪಂಜಾಬ್ ರಾಜ್ಯ ಪ್ರಕರಣದಲ್ಲಿ ಈ ಆದೇಶ ಹೊರಡಿಸಿದೆ.
ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಶಿರೋಮಣಿ ಅಕಾಲಿ ದಳದ ನಾಯಕ ಜಸ್ಕರನ್ಜಿತ್ ಸಿಂಗ್ ಅವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದರಾದರೂ, ಬಂಧನದ ವೇಳೆ ಸೂಕ್ತ ಲಿಖಿತ ಕಾರಣಗಳನ್ನು ನೀಡದ ಹಿನ್ನೆಲೆಯಲ್ಲಿ ಈ ಬಂಧನವನ್ನು ಸುಪ್ರೀಂ ಕೋರ್ಟ್ ಕಾನೂನುಬಾಹಿರವೆಂದು ಘೋಷಿಸಿ ಅವರ ಬಿಡುಗಡೆಗೆ ಆದೇಶ ನೀಡಿದೆ.
ಬಂಧನದ ಲಿಖಿತ ಕಾರಣಗಳನ್ನು ಒದಗಿಸದೆ ವ್ಯಕ್ತಿಯೊಬ್ಬರನ್ನು ಬಂಧಿಸುವುದು ಭಾರತೀಯ ಸಂವಿಧಾನದ ವಿಧಿ 22(1) ರ ನೇರ ಉಲ್ಲಂಘನೆಯಾಗಿದೆ ಹಾಗೂ ಇಂತಹ ಅಕ್ರಮ ಬಂಧನಕ್ಕೆ ಕಾರಣರಾದ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಇಲಾಖಾ ತನಿಖೆಗೆ ಆದೇಶಿಸಲು ಇದು ಪ್ರಬಲ ಆಧಾರವಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ವಿಧಿ 22(1) ರ ಅಡಿಯಲ್ಲಿ ನೀಡಲಾದ ರಕ್ಷಣೆಗಳು ಕೇವಲ ಕಾರ್ಯವಿಧಾನದ ಸುರಕ್ಷತೆಗಳಲ್ಲ, ಬದಲಿಗೆ ವ್ಯಕ್ತಿಯ ಮೂಲಭೂತ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಮೂಲತತ್ವಗಳಾಗಿವೆ;
ಹೀಗಾಗಿ ಇಂತಹ ಉಲ್ಲಂಘನೆಯ ಆಧಾರದ ಮೇಲೆ ಆರೋಪಿಯನ್ನು ಬಿಡುಗಡೆ ಮಾಡುವುದು ಜಾಮೀನು ಮಂಜೂರಾತಿಯಲ್ಲ, ಬದಲಾಗಿ ಅಸಂವಿಧಾನಿಕ ಬಂಧನದಿಂದ ಮುಕ್ತಿ ನೀಡುವುದಾಗಿದೆ ಎಂದು ಕೋರ್ಟ್ ವಿವರಿಸಿದೆ. ಈ ರಕ್ಷಣೆಯು ಸಾಮಾನ್ಯ ಐಪಿಸಿ ಅಪರಾಧಗಳು ಹಾಗೂ ಇತರ ವಿಶೇಷ ಕಾನೂನುಗಳಿಗೂ ಸಮಾನವಾಗಿ ಅನ್ವಯಿಸಲಿದ್ದು, ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ಪ್ರಕರಣದ ತನಿಖೆಯನ್ನು ತಕ್ಷಣವೇ ಬೇರೊಬ್ಬ ಅಧಿಕಾರಿಗೆ ವರ್ಗಾಯಿಸಿ, ತನಿಖೆಯಲ್ಲಿ ತಪ್ಪು ಸಾಬೀತಾದರೆ ಇಲಾಖಾ ಕ್ರಮ ಕೈಗೊಳ್ಳುವುದರ ಜೊತೆಗೆ ಅವರ ಸೇವಾ ಪುಸ್ತಕದಲ್ಲಿ ಈ ಪ್ರತಿಕೂಲ ಅಂಶವನ್ನು ದಾಖಲಿಸಬೇಕು ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಪ್ರಕರಣದ ಶೀರ್ಷಿಕೆ: JASKARAN JEET SINGH v STATE OF PUNJAB, Crl.A. No. 4234/2026, ದಿನಾಂಕ: 21-09-2026)
