Ur Kannada News

ಜನ ಮೆಚ್ಚುಗೆಯ ನಮ್ಮೂರ ಡಾಕ್ಟರ್,ಸೇವೆಯೇ ಅವರ ಗುರುತು: ಬೋಳಿಯಾರ್‌ನಲ್ಲಿ 35 ವರ್ಷಗಳಿಂದ ಆರೋಗ್ಯದ ಬೆಳಕು

 “ವೈದ್ಯೋ ನಾರಾಯಣೋ ಹರಿಃ” ಎಂಬ ನುಡಿಯ ಅರ್ಥವನ್ನು ತಮ್ಮ ಜೀವನದ ಮೂಲಕ ಸಾರ್ಥಕಗೊಳಿಸಿರುವ ನಮ್ಮೂರಿನ ಹಿರಿಯ ವೈದ್ಯರಾದ ಡಾ. ಕೆ. ರಾಜಾರಾಮ್ ಆಳ್ವ ಅವರು ಕಳೆದ 35 ವರ್ಷಗಳಿಂದ ಬೋಳಿಯಾರ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ನಿಸ್ವಾರ್ಥ ವೈದ್ಯಕೀಯ ಸೇವೆ ಸಲ್ಲಿಸುತ್ತಾ, “ಆಳ್ವ ಡಾಕ್ಟರ್” ಎಂದೇ ಚಿರಪರಿಚಿತರಾಗಿದ್ದಾರೆ. ಸಮಾಜಮುಖಿ ಮನೋಭಾವ, ವೃತ್ತಿಧರ್ಮದ ಮೇಲಿನ ನಿಷ್ಠೆ ಹಾಗೂ ಮಾನವೀಯ ಸೇವೆಯ ಮೂಲಕ ಅವರು ಜನಮನದಲ್ಲಿ ಅಚ್ಚಳಿಯದ ಸ್ಥಾನವನ್ನು ಸಂಪಾದಿಸಿದ್ದಾರೆ.

ಕೆ.ಟಿ. ಆಳ್ವ ಹಾಗೂ ಭವಾನಿ ಆಳ್ವ ದಂಪತಿಯ ಪುತ್ರರಾದ ಡಾ. ಕೆ. ರಾಜಾರಾಮ್ ಆಳ್ವ ಅವರು ಪಜೀರ್ ಗ್ರಾಮದ ಅಗರಿಮಾರ್‌ನಲ್ಲಿ ಜನಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತಮ್ಮ ಹುಟ್ಟೂರಲ್ಲೇ ಪೂರ್ಣಗೊಳಿಸಿದ ಅವರು, ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಇಂಟಿಗ್ರೇಟೆಡ್ ವೈದ್ಯಕೀಯ ಪದವಿ ಪಡೆದು ವೈದ್ಯಕೀಯ ವೃತ್ತಿಗೆ ಕಾಲಿಟ್ಟರು.

ಸುಮಾರು ಮೂವತ್ತೈದು ವರ್ಷಗಳ ಹಿಂದೆ ಬೋಳಿಯಾರ್ ಜಂಕ್ಷನ್ ಇನ್ನೂ ಅಭಿವೃದ್ಧಿಯ ಹಾದಿಯಲ್ಲಿದ್ದ ಸಣ್ಣ ಪ್ರದೇಶವಾಗಿತ್ತು. ಅಂದು ಕೇವಲ ಎರಡು ಅಂಗಡಿಗಳಿದ್ದ ಆ ಜಂಕ್ಷನ್‌ಗೆ ಗ್ರಾಮೀಣ ಜನರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಆಗಮಿಸಿದ ಡಾ. ಆಳ್ವ ಅವರು ಜನರಲ್ ವೈದ್ಯರಾಗಿ ತಮ್ಮ ಕ್ಲಿನಿಕ್ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಯಾವುದೇ ಕಪ್ಪು ಚುಕ್ಕೆಯಿಲ್ಲದ ಸೇವೆಯ ಮೂಲಕ ಜನರ ವಿಶ್ವಾಸವನ್ನು ಗಳಿಸಿ, ಬೋಳಿಯಾರ್‌ನ ಅತ್ಯಂತ ಪ್ರೀತಿಪಾತ್ರ ವೈದ್ಯರಾಗಿ ಗುರುತಿಸಿಕೊಂಡಿದ್ದಾರೆ.

ತುರ್ತು ಸಂದರ್ಭಗಳಲ್ಲಿ ರೋಗಿಗಳ ಮನೆಗಳಿಗೆ ತೆರಳಿ ಚಿಕಿತ್ಸೆ ನೀಡುವುದು, ಅಗತ್ಯವಿದ್ದಲ್ಲಿ ಮರಣದ ಖಚಿತತೆಗಾಗಿ ಖುದ್ದಾಗಿ ಭೇಟಿ ನೀಡುವುದು, ರೋಗಿಗಳಿಗೆ ಧೈರ್ಯ ತುಂಬುವ ಮಾತುಗಳ ಮೂಲಕ ಭರವಸೆ ಮೂಡಿಸುವುದು ಹಾಗೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಸೂಕ್ತ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡುವುದು ಅವರ ಸೇವೆಯ ವಿಶೇಷತೆಯಾಗಿದೆ. ಬೋಳಿಯಾರ್ ಗ್ರಾಮದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಎದುರಾದರೂ ಮೊದಲು ಡಾ. ಆಳ್ವ ಅವರ ಸಲಹೆ ಪಡೆಯುವುದು ಇಂದಿಗೂ ಅನೇಕ ಕುಟುಂಬಗಳ ಪರಿಪಾಠವಾಗಿದೆ.

ಕೇವಲ ಐದು ರೂಪಾಯಿ ಶುಲ್ಕದಿಂದ ಆರಂಭವಾದ ಅವರ ವೈದ್ಯಕೀಯ ಸೇವೆ ಇಂದಿಗೂ ಮಿತ ದರದಲ್ಲೇ ಮುಂದುವರಿದಿದೆ. ಹಣಕ್ಕಿಂತ ಸೇವೆಗೆ ಹೆಚ್ಚಿನ ಮಹತ್ವ ನೀಡಿದ ಅವರು, ಬಡವರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಸುಲಭವಾಗಿ ಆರೋಗ್ಯ ಸೇವೆ ದೊರೆಯುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ರೋಗಿಗಳಿಗೆ ಸಜ್ಜನಿಕೆಯಿಂದ ಮಾತನಾಡುವುದು, ರೋಗದ ಲಕ್ಷಣಗಳನ್ನು ವಿವರಿಸುವುದು, ಪಾಲಿಸಬೇಕಾದ ಪಥ್ಯಗಳ ಬಗ್ಗೆ ತಿಳಿಸುವುದು ಹಾಗೂ ಆತ್ಮವಿಶ್ವಾಸ ತುಂಬುವ ಸಲಹೆಗಳನ್ನು ನೀಡುವುದು ಅವರ ಸೇವೆಯ ಪ್ರಮುಖ ಗುಣಗಳಾಗಿವೆ.

ಇಂದು ಬೋಳಿಯಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಕ್ಲಿನಿಕ್‌ಗಳು ಹಾಗೂ ಆಸ್ಪತ್ರೆಗಳು ಲಭ್ಯವಿದ್ದರೂ, ವೈದ್ಯಕೀಯ ಸೌಲಭ್ಯಗಳು ವಿರಳವಾಗಿದ್ದ ಕಾಲದಲ್ಲಿ ಗ್ರಾಮೀಣ ಪ್ರದೇಶವನ್ನೇ ಆಯ್ಕೆ ಮಾಡಿಕೊಂಡು ಜನಸೇವೆಯನ್ನು ಜೀವನದ ಧ್ಯೇಯವಾಗಿಸಿಕೊಂಡ ಡಾ. ಕೆ. ರಾಜಾರಾಮ್ ಆಳ್ವ ಅವರ ಸೇವೆಯನ್ನು ಸ್ಥಳೀಯರು ಇಂದಿಗೂ ಕೃತಜ್ಞತೆಯಿಂದ ಸ್ಮರಿಸುತ್ತಾರೆ. ನಗರ ಪ್ರದೇಶದಲ್ಲಿ ಕ್ಲಿನಿಕ್ ಆರಂಭಿಸುವ ಅವಕಾಶಗಳಿದ್ದರೂ, ಗ್ರಾಮೀಣ ಜನರ ಆರೋಗ್ಯಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಅವರ ಸೇವೆ ಯಾವುದೇ ಪ್ರಶಸ್ತಿಗಿಂತಲೂ ಶ್ರೇಷ್ಠವಾಗಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಹಾಗೂ ಭಾನುವಾರ ಮಧ್ಯಾಹ್ನದವರೆಗೆ ರೋಗಿಗಳಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ನಮ್ಮೂರಿನ ಪ್ರೀತಿಯ ವೈದ್ಯರಾದ ಡಾ. ಕೆ. ರಾಜಾರಾಮ್ ಆಳ್ವ ಅವರಿಗೆ ದೇವರು ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ವರ್ಷಗಳ ಕಾಲ ಜನಸೇವೆ ಮಾಡುವ ಶಕ್ತಿ ನೀಡಲಿ ಎಂಬುದು ಗ್ರಾಮಸ್ಥರ ಹಾರೈಕೆಯಾಗಿದೆ.

– ಅಶ್ರಫ್ ಮೋನು ಬೋಳಿಯಾರ್
(+91 87469 39296)

  • UR News Kannada ಪ್ರಸ್ತುತಪಡಿಸುತ್ತದೆ: ಸಾಧಕರ ಸರಣಿ – 1

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.

Leave a Reply

Your email address will not be published. Required fields are marked *