Ur Kannada News

30 ವರ್ಷಗಳಿಂದ ಮನೆ ಮನೆಗೆ ನೀರು ತಲುಪಿಸುತ್ತಿರುವ ನಮ್ಮೂರಿನ ‘ನೀರ್ ಸಾಬ್’ ಹುಸೈನಾಕ

ಸಮಾಜದಲ್ಲಿ ವೈಟ್ ಕಾಲರ್ ಕೆಲಸಕ್ಕೆ ಎಷ್ಟು ಮಹತ್ವ ಇದೆಯೋ,ಅಷ್ಟೇ ಮಹತ್ವ ನಗರ ಪ್ರದೇಶವಿರಲಿ ಗ್ರಾಮಿಣ ಭಾಗವಿರಲಿ ದೈನಂದಿನ ಜನಸಾಮಾನ್ಯರ ಜೀವನದಲ್ಲಿ ಅತೀ ಅಗತ್ಯದ ಸೇವೆಯ ಮೂಲಕ ನಮ್ಮ ನಡುವೆ ಇರುವ ಹಲವಾರು ಜೀವಗಳಿವೆ ಜೀವಗಳ ಸೇವೆಯನ್ನು ಮಾತ್ರ ನಾವು ನೆನಪಿಸುವುದಿಲ್ಲ ಅನ್ನುವುದು ಮಾತ್ರ ವಾಸ್ತವ ಸತ್ಯ.

ಪ್ರತಿ ಮನೆಗೂ ಕೊಳವೆ ಬಾವಿ ಇರುವುದಿಲ್ಲ, ಈಗೀಗ ಕೆಲವಷ್ಟು ಮನೆಯಲ್ಲಿ ಮಾತ್ರ ಬಾವಿ ಇದೆ.ನಮ್ಮೂರಿನಲ್ಲಿ ಬಹುಸಂಖ್ಯಾತ ಮಂದಿ ಉಪಯೋಗಿಸುವುದು ಪಂಚಾಯತ್ ಸಂಪರ್ಕದ ನೀರನ್ನು.ಈ ಪಂಚಾಯತ್ ನೀರನ್ನು ಹಲವು ದಶಕಗಳಿಂದ ಮನೆ ಮನೆಗೆ ತಲುಪಿಸುತ್ತಿರುವ ವ್ಯಕ್ತಿಯೇ “ನಮ್ಮೂರಿನ ನೀರ್ ಸಾಬ್ ಹುಸೈನಾಕ”.

ಉಮರಬ್ಬ ಮತ್ತು ಬೀಪಾತುಮ್ಮ ನ ಪುತ್ರನಾಗಿ ಬೋಳಿಯಾರ್ ಗ್ರಾಮದ ನಲಿಕೆದಗುಡ್ಡೆಯಲ್ಲಿ ಹುಟ್ಟಿದ ಇವರು ಧರ್ಮ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಅರ್ಥಿಕವಾಗಿ ಸ್ಥಿತಿವಂತರಲ್ಲದಿದ್ದರೂ ಸ್ವಾಭಿಮಾನದ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

ಈ ನೀರು ಬಿಡುವ ಕೆಲಸ ಇದೆಯಲ್ಲ ಇದು ತುಂಬಾ ಸವಾಲಿನ ಕೆಲಸ. ಪ್ರತಿಯೊಬ್ಬರಿಗೂ ನೀರು ಅಗತ್ಯ ಅದನ್ನು ತಲುಪಿಸಲೇಬೇಕು, ಕೆಲವು ಮನೆಯಲ್ಲಿ ಶುಭ ಕಾರ್ಯ ಇರುತ್ತದೆ ಅಲ್ಲಿಗೂ ಬೇಕಾದಷ್ಟು ನೀರು ಪೊರೈಸಲೇಬೇಕು.ಇದನ್ನೆಲ್ಲಾ ಸಂಭಾಳಿಸಿಕೊಂಡು ಎಲ್ಲರನ್ನೂ ತೃಪ್ತಿಪಡಿಸಲು ಆಗದಿದ್ದರೂ, ಕಳೆದ ಮೂವತ್ತು ವರ್ಷಗಳಿಂದ ಪ್ರತಿ ಮನೆಗೂ ನೀರು ತಲುಪಿಸುವ ಕರ್ತವ್ಯ ಇವರು ನಿರ್ವಹಿಸುತ್ತಿದ್ದಾರೆ.

ನೀರು ಅತ್ಯಗತ್ಯ ಯಾವುದೇ ಅನಾರೋಗ್ಯಕ್ಕೆ ತುತ್ತಾದರೂ ರಜೆ ಇಲ್ಲದ ಈ ಕೆಲಸವನ್ನು ವಯೋಸಹಜ ಕಣ್ಣಿನ ದೃಷ್ಟಿದೋಶದಿಂದ ಕಣ್ಣಿನ ಸರ್ಜರಿಗೆ ಒಳಗಾದರೂ ಕಪ್ಪು ಕನ್ನಡಕ ಧರಿಸಿ ಅವರು ಮಾಡುತ್ತಿರುವ ಸೇವೆ ನಮಗೂ ಒಮ್ಮೊಮ್ಮೆ ಕಣ್ಣೀರು ಬರಿಸುತ್ತೆ.

ಬೆಳಿಗ್ಗೆ ಗ್ರಾಮ ಪಂಚಾಯತ್ ಮುಂಭಾಗ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಕೆಲಸಕ್ಕೆ ಹಾಜರಾಗುವ ಇವರು. ಎಲ್ಲಾದರೂ ಪೈಪ್ ಹಾಳಾಗಿದ್ದರೆ ಸರಿ ಮಾಡಿ ಪ್ರತಿ ಮನೆಗೂ ನೀರು ತಲುಪಿಸಿ ಸಂಜೆ ಆಗುವಾಗ ರಾಷ್ಟ್ರ ಧ್ವಜವನ್ನು ಇಳಿಸಿ ಅವತ್ತೇನಾದರೂ ಕರೆಂಟ್ ಇಲ್ಲದಿದ್ದರೆ ರಾತ್ರಿ ವರೆಗೂ ಕಾರ್ಯ ನಿರ್ವಹಿಸಿ ಮನೆಗೆ ತೆರಳುವ ಇಂತಹಾ ಶ್ರಮ ಜೀವಿಗಳಿಗೆ ನನ್ನ ಗೌರವದ ಸಲಾಂ.

ಸುದೀರ್ಘ ಮೂವತ್ತು ವರ್ಷಗಳಿಂದ ಸಮಯದ ಪರಿವೆ ಇಲ್ಲದೆ ರಜೆ ಇಲ್ಲದೆ ದಿನನಿತ್ಯದ ಜನಸಾಮಾನ್ಯರ ಸೇವೆಯನ್ನು ಮಾಡಿದ “ಹುಸೈನಾಕ” ರವರಲ್ಲಿ ನಿಮ್ಮ ಇಷ್ಟು ವರ್ಷದ ಸಂಪಾದನೆ ಏನು ಅಂತ ಕೇಳಿದಾಗ “ಬಗೆ ಬಗೆಯ ಬೈಗುಳಗಳು” ಅಂತ ನಗು ನಗುತ್ತಾ ಹೇಳುವಾಗ ಈ ನೀರು ಬಿಡುವ ಕೆಲಸ ಎಷ್ಟು ಸವಾಲಿನದ್ದು ಅನ್ನುವ ಸತ್ಯ ಅರಿವಿಗೆ ಬಾರದೇ ಇರಲಾರದು.

ಇಂತಹಾ ಜನಸೇವಕರಿಗೆ ಪ್ರಶಸ್ತಿ ಅನ್ನುವುದು ದೂರದ ಮಾತು,ಕನಿಷ್ಠ ಗೌರವ ಕೊಡುವ ಕೆಲಸ ಆದರೂ ನಾವು ಮಾಡಬೇಕು ಅನ್ನುವ ವಿನಂತಿಯೊಂದಿಗೆ ದೇವರು ಅವರಿಗೆ ಅಯುರಾರೋಗ್ಯ ದೀರ್ಘಾಯುಷ್ಯ ಕೊಡಲಿ ಅನ್ನುವ ಮನದಾಳದ ಪ್ರಾರ್ಥನೆ.

ಅಶ್ರಪ್ ಮೋನು ಬೋಳಿಯಾರ್
ಮೊ:8746939296

UR News Kannada ಪ್ರಸ್ತುತಪಡಿಸುತ್ತದೆ: ಸಾಧಕರ ಸರಣಿ – 3

🟠ಬೋಳಿಯಾರ್‌ನ ನೀರ್ ಸಾಬ್ ಹುಸೈನಾಕ ಅವರ ಸೇವಾ ಪಯಣ

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.

Leave a Reply

Your email address will not be published. Required fields are marked *