ಊಟಕ್ಕಿಂತಲೂ ಮಿಗಿಲಾದ ಪ್ರೀತಿಯ ಆತಿಥ್ಯ: ಮುಡಿಪುವಿನ ‘ಭಟ್ರ ಹೋಟೆಲ್’
ನಾವು ಎಷ್ಟೇ ದೊಡ್ಡ ಹೋಟೆಲ್‌ಗೆ ಹೋದರೂ, ರೆಸ್ಟೋರೆಂಟ್‌ಗಳಲ್ಲಿ ಕುಳಿತರೂ ಸಿಗದ ಒಂದು ವಿಷಯವೆಂದರೆ ಅದು ‘ಆತ್ಮೀಯತೆಯ ಆತಿಥ್ಯ’. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪುವಿನಲ್ಲಿರುವ ಈ ‘ಭಟ್ರ ಹೋಟೆಲ್’ಗೆ ಕಾಲಿಟ್ಟರೆ ಸಾಕು, ರುಚಿಕರ ಊಟದ ಜೊತೆಗೆ ಮನಸ್ಸಿಗೆ ಸಿಗುವ ನೆಮ್ಮದಿ ಮತ್ತು ಪ್ರೀತಿ ವರ್ಣಿಸಲು ಅಸಾಧ್ಯ . ಮುಡಿಪುವಿನ ಕುರ್ನಾಡು ರಸ್ತೆಯಲ್ಲಿರುವ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹತ್ತಿರದ ಗಣೇಶ್ ಮಹಲ್ ಕಾಂಪ್ಲೆಕ್ಸ್‌ನಲ್ಲಿ ಈ ಪ್ರಸಿದ್ಧ ಹೋಟೆಲ್ ಇದೆ. ಈ ಹೋಟೆಲ್‌ನ ಮಾಲೀಕರಾದ ಭಟ್ರು, ನನಗೆ ಅತ್ಯಂತ ಆತ್ಮೀಯ ವ್ಯಕ್ತಿಗಳಲ್ಲಿ ಒಬ್ಬರು.
ನಾನು ಹೈಸ್ಕೂಲ್ ಹಾಗೂ ಪಿಯುಸಿ ಓದುತ್ತಿದ್ದ ದಿನಗಳಲ್ಲಿ ಪ್ರತಿದಿನ ಈ ಹೋಟೆಲ್‌ಗೆ ತಪ್ಪದೇ ಹೋಗುತ್ತಿದ್ದೆ. ಅಂದು ಸಣ್ಣದಾಗಿದ್ದ ಈ ಹೋಟೆಲ್, ಇಂದು ಕಾಲಕ್ಕೆ ತಕ್ಕಂತೆ ದೊಡ್ಡದಾಗಿ ಬೆಳೆದು ನಿಂತಿದೆ. ಹೋಟೆಲ್‌ನ ಗಾತ್ರ ದೊಡ್ಡದಾಗಿದ್ದರೂ, ಅವರ ಸೇವೆ ಮತ್ತು ಪ್ರೀತಿಯಲ್ಲಿ ಸಣ್ಣ ಬದಲಾವಣೆಯೂ ಆಗಿಲ್ಲ. ಇಂದಿಗೂ ನಾನು ಅಲ್ಲಿಗೆ ಹೋದರೆ, ಅಂದಿನಷ್ಟೇ ಪ್ರೀತಿಯಿಂದ, ಅದೇ ಮಂದಹಾಸದಿಂದ ನನ್ನನ್ನು ಎದುರಾಗುತ್ತಾರೆ.
ಭಟ್ರು ಕೇವಲ ಲಾಭದ ದೃಷ್ಟಿಯಿಂದ ಗ್ರಾಹಕರನ್ನು ಎಂದೂ ನೋಡಲಿಲ್ಲ. ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯಕ್ಕೆ ಅವರು ನೀಡುವ ಮಹತ್ವವೇ ಇವರ ಇಷ್ಟೊಂದು ಯಶಸ್ಸಿನ ರಹಸ್ಯ.
ಇಲ್ಲಿನ ಊಟದ ವೈಶಿಷ್ಟ್ಯವೇ ಬೇರೆ. ಅನ್ನ, ಸಾಂಬಾರ್, ಪಲ್ಯ, ಚಟ್ನಿಯ ಮೇಲೆ ಹೆಚ್ಚಿದ ಹಸಿ ಈರುಳ್ಳಿ, ಮೊಸರು, ಮಜ್ಜಿಗೆ ಹಾಗೂ ಮಜ್ಜಿಗೆ ಮೆಣಸು ಮತ್ತು ಮನೆಯಲ್ಲೇ ಸ್ವತಃ ತಯಾರಿಸಿದ ರುಚಿಕರ ಉಪ್ಪಿನಕಾಯಿ ಇಲ್ಲಿನ ಪ್ರಮುಖ ಆಕರ್ಷಣೆ. ಸ್ವಲ್ಪ ಹೆಚ್ಚುವರಿ ಪಲ್ಯ ಕೇಳಿದರೂ ಸಾಕು, ಉದಾರವಾಗಿ ನೀಡುವ ‘ಕೈ’ ಇವರದ್ದು. ನಿಜ ಹೇಳಬೇಕೆಂದರೆ, ಇವರ ಆತಿಥ್ಯ ನಾವು ಸೇವಿಸುವ ಊಟಕ್ಕಿಂತಲೂ ಅತ್ಯಂತ ರುಚಿಯಾಗಿದೆ.
“ಕಡಿಮೆ ರೂಪಾಯಿಗೆ ಹೊಟ್ಟೆ ತುಂಬಾ, ಊಟ ಕೊಡುವ ಹೋಟೆಲ್ ಎಂದರೆ ಅದು ಭಟ್ರ ಹೋಟೆಲ್” ಎಂದು ನಮ್ಮ ಪಿಯುಸಿಯ ಎಕನಾಮಿಕ್ಸ್ ಉಪನ್ಯಾಸಕರು ಕ್ಲಾಸ್‌ನಲ್ಲಿಯೂ ಹೇಳುತ್ತಿದ್ದರು.
ಇಂದಿಗೂ ಇಲ್ಲಿಗೆ ಕಾಲೇಜು ಉಪನ್ಯಾಸಕರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ದಿನಗೂಲಿ ಕಾರ್ಮಿಕರು ಸೇರಿದಂತೆ ಪ್ರತಿಯೊಬ್ಬರೂ ಸಾಲು ಸಾಲಾಗಿ ಬರುತ್ತಾರೆ. ಬೆಳೆಯುತ್ತಿರುವ ಮುಡಿಪುವಿನ ಮಧ್ಯೆ, ಇಂದಿಗೂ ತನ್ನತನ ಮತ್ತು ಪ್ರೀತಿಯನ್ನು ಉಳಿಸಿಕೊಂಡು ಬಂದಿರುವ ಭಟ್ರ ಹೋಟೆಲ್, ಕೇವಲ ಹಸಿವು ನೀಗಿಸುವ ಸ್ಥಳವಲ್ಲ; ಅದು ನೆನಪುಗಳನ್ನು ಮರುಕಳಿಸುವ ಸುಂದರ ನೆಲೆ.
