APP ಮಡಿಕೇರಿ ಮುಹಮ್ಮದ್ ಶೌಕತ್ ಸಮರ್ಥ ವಾದ: ದರೋಡೆ, ಅತ್ಯಾಚಾರ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ
ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಚಿನ್ನಾಭರಣ ಹಾಗೂ ನಗದು ದೋಚಿದ್ದ ಪ್ರಕರಣದ ಆರೋಪಿಗೆ ಮಡಿಕೇರಿಯ 3ನೇ ಅಧಿಕ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಲಯವು 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ಒಟ್ಟು ₹50,000 ದಂಡ ವಿಧಿಸಿ ತೀರ್ಪು ನೀಡಿದೆ. ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟುಕ್ಕುಂಜ ಚೇರಂಬಾಣಿ ನಿವಾಸಿ ಸುದರ್ಶನ್ (29) ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದು, ನ್ಯಾಯಾಧೀಶ ಸುರೇಂದ್ರ ಜಿ. ಅವರು ಈ ಮಹತ್ವದ ತೀರ್ಪನ್ನು ಪ್ರಕಟಿಸಿದ್ದಾರೆ.
ಪ್ರಕರಣದ ವಿವರಗಳ ಪ್ರಕಾರ, 2024ರ ಆಗಸ್ಟ್ 22ರಂದು ಬೆಳಿಗ್ಗೆ ಸಂತ್ರಸ್ತೆಯ ಮನೆಯ ಅಡುಗೆ ಕೊಠಡಿಯ ಬಳಿ ಹೊಂಚು ಹಾಕಿ ನಿಂತಿದ್ದ ಸುದರ್ಶನ್, ಮಹಿಳೆಯನ್ನು ಬೆದರೂಮ್‌ಗೆ ಎಳೆದೊಯ್ದು ಕುತ್ತಿಗೆ ಹಿಸುಕಿ ಕೊಲೆ ಬೆದರಿಕೆ ಹಾಕಿದ್ದನು. ಬಳಿಕ ಆಕೆಯ ಮೈಮೇಲಿದ್ದ ಚಿನ್ನದ ಸರ, ಮನೆಯಲ್ಲಿದ್ದ 62 ಗ್ರಾಂ ಚಿನ್ನಾಭರಣ, ₹1500 ನಗದು ಹಾಗೂ ಮೊಬೈಲ್ ಫೋನ್ ದೋಚಿ ಸ್ಥಳದಿಂದ ಪರಾರಿಯಾಗಿದ್ದನು.
ಈ ಘಟನೆಯ ಕುರಿತು ಭಾಗಮಂಡಲ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಬೆಳ್ತಂಗಡಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಮುಹಮ್ಮದ್ ಶೌಕತ್ ಅವರು ಸಾಕ್ಷಿಗಳನ್ನು ವಿಚಾರಣೆ ನಡೆಸಿ ಸಮರ್ಥವಾಗಿ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಆರೋಪಿಗೆ ಬಿ.ಎನ್.ಎಸ್. ಕಲಂ 64(1)ರಡಿ 10 ವರ್ಷ ಜೈಲು ಶಿಕ್ಷೆ ಹಾಗೂ ₹25,000 ದಂಡ, ಕಲಂ 309(3)ರಡಿ 7 ವರ್ಷ ಜೈಲು ಶಿಕ್ಷೆ ಹಾಗೂ ₹15,000 ದಂಡ ಮತ್ತು ಕಲಂ 351(3)ರಡಿ 5 ವರ್ಷ ಜೈಲು ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ಆದೇಶಿಸಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.


