ಬಯೋಮೆಟ್ರಿಕ್ ಬರದೆ ಜನ ಪರದಾಟ: ಇ-ಕೆವೈಸಿ ಸಮಯ ಮಿತಿ ವಿಸ್ತರಿಸಲು SDPI ಮನವಿ
ಉಳ್ಳಾಲ:ಸೆ15; ರಾಜ್ಯದಲ್ಲಿ ಪಡಿತರ ಚೀಟಿದಾರರ e-KYC ಪ್ರಕ್ರಿಯೆ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಗಂಟೆಗಟ್ಟಲೆ ಸರದಿಯಲ್ಲಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ವರ್ ನಿಧಾನಗತಿ ಹಾಗೂ ತಾಂತ್ರಿಕ ಸಮಸ್ಯೆಗಳಿಂದಾಗಿ e-KYC ಪೂರ್ಣಗೊಳಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ವಿಶೇಷವಾಗಿ ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು ಹಾಗೂ ಉದ್ಯೋಗಸ್ಥರು e-KYC ಮಾಡಿಸಿಕೊಳ್ಳಲು ತಮ್ಮ ಕೆಲಸ ಅಥವಾ ತರಗತಿಗಳಿಗೆ ರಜೆ ತೆಗೆದುಕೊಂಡು ಗಂಟೆಗಟ್ಟಲೆ ಕಾಯಬೇಕಾಗುತ್ತಿದ್ದು, ಇದರಿಂದ ಅವರ ದೈನಂದಿನ ಆದಾಯ ಹಾಗೂ ಕೆಲಸದ ಮೇಲೂ ನೇರ ಪರಿಣಾಮ ಬೀರುತ್ತಿದೆ.
ಈ ಹಿನ್ನೆಲೆಯಲ್ಲಿ e-KYC ಪ್ರಕ್ರಿಯೆ ವೇಗವಾಗಿ ಪೂರ್ಣಗೊಳ್ಳಲು ಸರ್ವರ್ ಸಾಮರ್ಥ್ಯ ಹಾಗೂ ತಾಂತ್ರಿಕ ವ್ಯವಸ್ಥೆಯನ್ನು ತಕ್ಷಣವೇ ಹೆಚ್ಚಿಸಬೇಕು. ಅಲ್ಲದೆ, e-KYCಗೆ ನಿಗದಿಪಡಿಸಿರುವ ಗಡುವನ್ನು ಸೂಕ್ತ ಅವಧಿಗೆ ವಿಸ್ತರಿಸಬೇಕು ಎಂದು ಆಗ್ರಹಿಸಲಾಗಿದೆ.
ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲವಾಗುವಂತೆ ನ್ಯಾಯಬೆಲೆ ಅಂಗಡಿಗಳ ಜೊತೆಗೆ ಸೇವಾ ಕೇಂದ್ರಗಳು ಹಾಗೂ ಇತರ ಅಧಿಕೃತ ಕೇಂದ್ರಗಳಲ್ಲಿಯೂ e-KYC ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಫಲಾನುಭವಿಗಳು ತಮ್ಮ ಮೊಬೈಲ್ ಹಾಗೂ ಆಧಾರ್ ಮೂಲಕ ಸರಳ, ಸುರಕ್ಷಿತವಾಗಿ ಸ್ವಯಂ e-KYC ಮಾಡಿಕೊಳ್ಳುವ ವ್ಯವಸ್ಥೆಯನ್ನೂ ಜಾರಿಗೊಳಿಸಬೇಕು.
ವಯೋವೃದ್ಧರು, ಅಂಗವಿಕಲರು ಹಾಗೂ ಕೆಲಸಕ್ಕೆ ರಜೆ ಪಡೆಯಲು ಸಾಧ್ಯವಾಗದವರಿಗೆ ವಿಶೇಷ e-KYC ಶಿಬಿರಗಳನ್ನು ಆಯೋಜಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. e-KYC ಪೂರ್ಣಗೊಳಿಸಲು ವಿಳಂಬವಾದ ಕಾರಣಕ್ಕೆ ಯಾವುದೇ ಅರ್ಹ ಫಲಾನುಭವಿಯ ಪಡಿತರ ಸೌಲಭ್ಯವನ್ನು ಸ್ಥಗಿತಗೊಳಿಸಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಫಲಾನುಭವಿಗಳ ಸಮಯ, ಆದಾಯ ಹಾಗೂ ಉದ್ಯೋಗಕ್ಕೆ ತೊಂದರೆಯಾಗದಂತೆ e-KYC ಪ್ರಕ್ರಿಯೆಯನ್ನು ಸರಳ, ವೇಗವಾದ ಮತ್ತು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವ ರೀತಿಯಲ್ಲಿ ಜಾರಿಗೊಳಿಸುವಂತೆ SDPI ಮಂಗಳೂರು (ಉಳ್ಳಾಲ ಕ್ಷೇತ್ರ ಸಮಿತಿ) ವತಿಯಿಂದ ಉಳ್ಳಾಲ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸುವ ಸಂದರ್ಭದಲ್ಲಿ SDPI ಮಂಗಳೂರು ಉಳ್ಳಾಲ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಝಾಹಿದ್ ಮಲಾರ್, ಕಾರ್ಯದರ್ಶಿ ಉಬೈದ್ ಅಮ್ಮೆಂಬಳ, ಕೋಶಾಧಿಕಾರಿ ಜುನೈದ್ RKC ಹಾಗೂ SDPI ದೇರಳಕಟ್ಟೆ ಬ್ಲಾಕ್ ಜೊತೆ ಕಾರ್ಯದರ್ಶಿ ನವಾಝ್ ಕುತ್ತಾರ್ ಉಪಸ್ಥಿತರಿದ್ದರು.

