ಕರಾವಳಿಗರ ದಶಕಗಳ ಆಶಯ ಈಡೇರಿಸಿದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಬಂಟ್ವಾಳ ಲೀಗಲ್ ಸೆಲ್ ವತಿಯಿಂದ ವಿಶೇಷ ಶ್ಲಾಘನೆ
ಮಂಗಳೂರು: ಕರಾವಳಿ ಜನರ ಬಹುದಿನಗಳ ಕನಸು ಹಾಗೂ ಹೋರಾಟಕ್ಕೆ ಕೊನೆಗೂ ಐತಿಹಾಸಿಕ ಸ್ಪಂದನೆ ದೊರೆತಿದ್ದು, ತುಳು ಭಾಷೆಯನ್ನು ಕರ್ನಾಟಕದ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ತುಳು ಭಾಷೆಯ ಐತಿಹಾಸಿಕತೆ, ಶ್ರೀಮಂತ ಸಾಂಸ್ಕೃತಿಕ ಮಹತ್ವ ಹಾಗೂ ಕರಾವಳಿ ಭಾಗದ ಜನರ ಭಾವನೆಗಳನ್ನು ಗೌರವಿಸಿ, ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಈ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಈ ಮಾನ್ಯತೆಯು ಕೇವಲ ಒಂದು ಭಾಷೆಗೆ ಸಿಕ್ಕ ಗೌರವ ಮಾತ್ರವಲ್ಲದೆ, ಸಮಗ್ರ ತುಳು ಭಾಷಿಕರ ಭಾವನೆ, ಸಂಸ್ಕೃತಿ ಮತ್ತು ಅಸ್ಮಿತೆಗೆ ದೊರೆತ ದೊಡ್ಡ ಜಯವಾಗಿದೆ.
ರಾಜ್ಯ ಸರ್ಕಾರದ ಈ ಮಹತ್ವದ ನಿರ್ಧಾರವನ್ನು ಬಂಟ್ವಾಳ ಲೀಗಲ್ ಸೆಲ್ ಅಧ್ಯಕ್ಷರಾದ ಶ್ರೀ ಸುರೇಶ್ ಪೂಜಾರಿ ಅವರು ಮುಕ್ತಕಂಠದಿಂದ ಶ್ಲಾಘಿಸಿ, ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ತುಳು ಭಾಷೆಗೆ ಆಡಳಿತಾತ್ಮಕ ಮಾನ್ಯತೆ ನೀಡಿರುವುದು ಕರಾವಳಿ ಪ್ರದೇಶದ ಜನರ ಬಹುದಿನಗಳ ಆಶಯಕ್ಕೆ ಸಿಕ್ಕ ಜಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ತುಳು ನಾಡಿನ ಜನತೆಯ ದೀರ್ಘಕಾಲದ ಬೇಡಿಕೆಯನ್ನು ಪರಿಗಣಿಸಿ, ಭಾಷೆಯ ಬೆಳವಣಿಗೆಗೆ ಶಕ್ತಿ ತುಂಬಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಬಂಟ್ವಾಳ ಲೀಗಲ್ ಸೆಲ್ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು ಹಾಗೂ ಅಭಿನಂದನೆಗಳನ್ನು ತಿಳಿಸಿದರು.




