ಮೌನವಾಗಿ ಸೇವೆ ಸಲ್ಲಿಸುತ್ತಿರುವ ನಿಜವಾದ ಹೀರೋಗಳು: ಉಪ್ಪಿನಂಗಡಿ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ ಹೀರ್ತಡ್ಕ ಯುವಕರು

ಉಪ್ಪಿನಂಗಡಿ (ದಕ್ಷಿಣ ಕನ್ನಡ):ಕಳೆದ ಕೆಲವು ದಿನಗಳಿಂದ ಕರಾವಳಿ ಭಾಗಗಳಲ್ಲಿ ಹಾಗೂ ಉಪ್ಪಿನಂಗಡಿ ಸುತ್ತಮುತ್ತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೇತ್ರಾವತಿ ನದಿಯ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ನದಿ ತೀರದ ಹಲವಾರು ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಈ ಕಷ್ಟಕರ ಸಂದರ್ಭದಲ್ಲಿ ಸ್ಥಳೀಯ ಯುವಕರ ತಂಡವೊಂದು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಹಗಲು-ರಾತ್ರಿ ಸಂತ್ರಸ್ತರ ನೆರವಿಗೆ ಧಾವಿಸುವ ಮೂಲಕ ಮಾನವೀಯತೆ ಮೆರೆದಿದೆ.
ಸ್ಥಳೀಯ ನಿವಾಸಿಗಳಾದ ಶಬೀರ್ ಹಿರ್ತಡ್ಕ (ಪುತ್ತಾಕ ಮೇಸ್ತ್ರಿ ಅವರ ಪುತ್ರ), ಅಜ್ಮಿ ಹಿರ್ತಡ್ಕ (ಬಶೀರ್ ಟೈಲರ್ ಅವರ ಪುತ್ರ) ಹಾಗೂ ಅವರ ಸ್ನೇಹಿತರು ನೆರೆ ಪೀಡಿತ ಮನೆಗಳಿಂದ ಬೆಲೆಬಾಳುವ ವಸ್ತುಗಳು ಮತ್ತು ಗೃಹೋಪಯೋಗಿ ಸಾಮಾನನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
“ನಾವು ನಿಮ್ಮೊಂದಿಗಿದ್ದೇವೆ, ಧೈರ್ಯಗೆಡಬೇಡಿ. ಯಾವುದೇ ತುರ್ತು ಸಹಾಯಕ್ಕೂ ನಾವು ಇಡೀ ರಾತ್ರಿ ಇಲ್ಲೇ ಇರುತ್ತೇವೆ” ಎಂದು ಧೈರ್ಯ ತುಂಬುತ್ತಿರುವ ಈ ಯುವಕರು ಕಳೆದ ಹಲವು ವರ್ಷಗಳಿಂದಲೂ ಮೌನವಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಯಾವುದೇ ಸಾಮಾಜಿಕ ಜಾಲತಾಣಗಳ ಪ್ರಚಾರ, ವಿಡಿಯೋ ಅಥವಾ ಖ್ಯಾತಿಯ ಹಂಬಲವಿಲ್ಲದೆ ನಿಸ್ವಾರ್ಥ ಮನೋಭಾವದಿಂದ ಸ್ಪಂದಿಸುತ್ತಿರುವ ಈ ಯುವಕರ ಸೇವೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಬರಹ: ಶಹದ್ ಮಠ
