Ur Kannada News

ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ: ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸುನೀಲ್ ಕುಮಾರ್ ಸೂಕ್ತವೇ?

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಹಾಗೂ ಪ್ರಮುಖವಾಗಿ ವಿರೋಧ ಪಕ್ಷವಾದ ಬಿಜೆಪಿಯಲ್ಲಿ ನಾಯಕತ್ವದ ಕುರಿತಾದ ಚರ್ಚೆಗಳು ಮತ್ತೊಮ್ಮೆ ಕಾವು ಪಡೆದುಕೊಂಡಿವೆ. ಪ್ರಸ್ತುತ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಆರ್‌ ಅಶೋಕ್ ಅವರ ಕಾರ್ಯವೈಖರಿ ಮತ್ತು ಪಕ್ಷದ ಸಂಘಟನಾ ತಂತ್ರಗಳ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಬಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಅವರ ಬದಲಿಗೆ ಕಾರ್ಕಳ ಶಾಸಕ ಹಾಗೂ ಪ್ರಭಾವಿ ನಾಯಕ ವಿ. ಸುನೀಲ್ ಕುಮಾರ್ ಅವರಿಗೆ ವಿಪಕ್ಷ ನಾಯಕನ ಜವಾಬ್ದಾರಿ ನೀಡಬೇಕೆಂಬ ಕೂಗು ಜಾಲತಾಣಗಳಲ್ಲಿ ಜೋರಾಗಿದೆ.

ವಿಪಕ್ಷ ನಾಯಕನಾಗಿ ಆರ್‌ ಅಶೋಕ್ ಅವರು ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಸಂಪೂರ್ಣವಾಗಿ ಧ್ವನಿ ಎತ್ತಲು ವಿಫಲರಾಗಿದ್ದಾರೆ ಎಂಬ ಆಕ್ಷೇಪಣೆಗಳು ಕೆಲವು ವಲಯಗಳಲ್ಲಿ ಕೇಳಿಬರುತ್ತಿದ್ದು, ಕರಾವಳಿ ಭಾಗದ ಪ್ರಭಾವಿ ಹಿಂದುತ್ವದ ಮುಖ ಹಾಗೂ ಸಂಘಟನಾತ್ಮಕವಾಗಿ ಚುರುಕಾಗಿರುವ ಸುನೀಲ್ ಕುಮಾರ್ ಅವರಿಗೆ ಈ ಸ್ಥಾನ ನೀಡಿದರೆ ಪಕ್ಷಕ್ಕೆ ಹೊಸ ಮೆರಗು ಮತ್ತು ಆಕ್ರಮಣಕಾರಿ ಶಕ್ತಿ ಸಿಗಲಿದೆ ಎಂಬುದು ಕಾರ್ಯಕರ್ತರ ವಾದ. ಶಾಸಕರಾಗಿ ಹಾಗೂ ಸಚಿವರಾಗಿ ಸಕ್ರಿಯರಾಗಿದ್ದ ಸುನೀಲ್ ಕುಮಾರ್ ಅವರು ಯುವ ಸಮುದಾಯದಲ್ಲಿ ತಮ್ಮದೇ ಆದ ಬಲವಾದ ಬೆಂಬಲ ಹೊಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ಗಳು ಮತ್ತು ಪೋಲ್‌ಗಳಲ್ಲಿ ‘ಆರ್ ಅಶೋಕ್ ಬದಲಿಗೆ ಸುನೀಲ್ ಕುಮಾರ್ ವಿರೋಧ ಪಕ್ಷದ ನಾಯಕ ಆದರೆ ಹೇಗಿರುತ್ತೆ?’ ಎಂಬ ಪ್ರಶ್ನೆಗಳು ಹರಿದಾಡುತ್ತಿದ್ದು, ನೆಟ್ಟಿಗರು ಸುನೀಲ್ ಕುಮಾರ್ ಪರ ಹಾಗೂ ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವಿಪಕ್ಷದಲ್ಲಿ ಹೊಸ ನಾಯಕತ್ವ ಮೂಡಿಬಂದರೆ ಆಡಳಿತಾರೂಢ ಸರ್ಕಾರವನ್ನು ಸದನದ ಒಳಗೂ ಮತ್ತು ಹೊರಗೂ ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಬಹುದು ಎಂಬ ಅಭಿಪ್ರಾಯ ಒಂದೆಡೆಯಾದರೆ, ಮುಂಬರುವ ದಿನಗಳಲ್ಲಿ ಬಿಜೆಪಿಯ ಆಂತರಿಕ ನಿರ್ಧಾರಗಳ ಮೇಲೆ ಈ ಚರ್ಚೆಗಳು ಯಾವ ರೀತಿ ಪ್ರಭಾವ ಬೀರಲಿವೆ ಎಂಬುದನ್ನು ಕಾದು ನೋಡಬೇಕಿದೆ.

ವಿಧಾನಸಭೆಯ ಕಲಾಪಗಳಲ್ಲಿ ವಿಷಯಾಧಾರಿತವಾಗಿ ಹಾಗೂ ತೀಕ್ಷ್ಣ ವಾಕ್ಚಾತುರ್ಯದ ಮೂಲಕ ಆಡಳಿತಾರೂಢ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಸುನೀಲ್ ಕುಮಾರ್ ಪ್ರವೀಣರು. ಸರ್ಕಾರದ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನೇ ತಮ್ಮ ಸಖತ್ ಪ್ರಶ್ನೆಗಳಿಂದ ಮತ್ತು ಧ್ವನಿಯಿಂದ ತರಾಟೆಗೆ ತೆಗೆದುಕೊಳ್ಳುವ ಅವರ ಶೈಲಿ ವಿಪಕ್ಷಕ್ಕೆ ಸದನದ ಒಳಗೆ ದೊಡ್ಡ ಬಲ ನೀಡುತ್ತದೆ. ಕೇವಲ ಆರೋಪಗಳನ್ನಷ್ಟೇ ಮಾಡದೇ, ನಿಯಮಾವಳಿಗಳ ಅಡಿಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಮರ್ಥ್ಯ ಅವರದ್ದು

ಬಿಜೆಪಿ ಕಾರ್ಯಕರ್ತರ ನೆಚ್ಚಿನ ನಾಯಕ

ಸಂಘಟನಾತ್ಮಕ ಹಿನ್ನೆಲೆಯಿಂದ ಬಂದಿರುವ ಸುನೀಲ್ ಕುಮಾರ್ ಅವರು ಬಿಜೆಪಿ ಕಾರ್ಯಕರ್ತರಲ್ಲಿ ಅತ್ಯಂತ ಜನಪ್ರಿಯ ನಾಯಕರಾಗಿದ್ದಾರೆ. ಕರಾವಳಿ ಭಾಗದ ಹಿಂದುತ್ವದ ಪ್ರಭಾವಿ ಮುಖವಾಗಿ ಗುರುತಿಸಿಕೊಂಡಿರುವ ಇವರು, ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.

ಸಚಿವರಾಗಿ, ಶಾಸಕರಾಗಿ ಹಾಗೂ ಪ್ರಮುಖ ಸಂಘಟಕರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಸುನೀಲ್ ಕುಮಾರ್ ಅವರಿಗೆ ವಿಪಕ್ಷ ನಾಯಕನ ಜವಾಬ್ದಾರಿ ನೀಡಿದರೆ, ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಲು ಸಾಧ್ಯ ಎಂಬುದು ಬೆಂಬಲಿಗರ ಬಲವಾದ ವಾದ

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.

Leave a Reply

Your email address will not be published. Required fields are marked *