ಬಿ.ಸಿ.ರೋಡ್: ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲೆಯಿಂದ ‘SIR ಲೀಗಲ್ ಸೆಲ್’ ರಚನೆ | ವಕೀಲ ಕಬೀರ್ ಕೆಮ್ಮಾರ ಸದಸ್ಯರಾಗಿ ಆಯ್ಕೆ

ಬಿ.ಸಿ.ರೋಡ್: ವಿಶೇಷ ತೀವ್ರ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಡಿ ಎನ್ಯೂಮರೇಷನ್ ಫಾರ್ಮ್ ಸಲ್ಲಿಕೆಯ ಅವಧಿ ಮುಕ್ತಾಯಗೊಂಡ ನಂತರ ನಡೆಯಲಿರುವ ವಿವಿಧ ಪ್ರಕ್ರಿಯೆಗಳು ಹಾಗೂ ಮತದಾರರ ಹಕ್ಕುಗಳ ರಕ್ಷಣೆಗಾಗಿ ಅಗತ್ಯ ಕಾನೂನು ನೆರವು ಮತ್ತು ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ, ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ‘S I R ಜಿಲ್ಲಾ ಲೀಗಲ್ ಸೆಲ್’ ಅನ್ನು ರಚಿಸಲಾಗಿದೆ. ಈ ಲೀಗಲ್ ಸೆಲ್ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಒಳಗೊಂಡಿರಲಿದೆ.
SIR ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಗೂ ಮತದಾರರು ಎದುರಿಸಬಹುದಾದ ಕಾನೂನು ಸಂಬಂಧಿತ ಸಮಸ್ಯೆಗಳು, ಆಕ್ಷೇಪಣೆಗಳು, ಮೇಲ್ಮನವಿಗಳು ಹಾಗೂ ಇತರೆ ಅಗತ್ಯ ವಿಷಯಗಳಲ್ಲಿ ಸೂಕ್ತ ಮಾರ್ಗದರ್ಶನ ಮತ್ತು ಕಾನೂನು ಸಹಾಯವನ್ನು ಈ ಲೀಗಲ್ ಸೆಲ್ ಮೂಲಕ ಒದಗಿಸಲು ತೀರ್ಮಾನಿಸಲಾಗಿದೆ ಎಂದು ಪಕ್ಷದ ಪತ್ರಿಕಾ ಪ್ರಕಟಣೆ ತಿಳಿಸಿದೆ. ಎಸ್ಡಿಪಿಐ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಲೀಗಲ್ ಸೆಲ್ ಸಮಿತಿಯನ್ನು ಅಧಿಕೃತವಾಗಿ ರಚಿಸಲಾಯಿತು.

