ಪ್ರಚೋದನಾಕಾರಿ ಭಾಷಣ ಆರೋಪ ಪ್ರಕರಣ: ರಿಯಾಜ್ ಫರಂಗಿಪೇಟೆಗೆ 6 ತಿಂಗಳು ಜೈಲು, ₹10 ಸಾವಿರ ದಂಡ,ಮುಂದಿನ ಕಾನೂನು ಹಾದಿ ಏನು?

ಬೆಳ್ತಂಗಡಿ: ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತೆ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪ ಪ್ರಕರಣದಲ್ಲಿ ಆರೋಪಿಗೆ ಬೆಳ್ತಂಗಡಿಯ ಮಾನ್ಯ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ರಿಯಾಜ್ ಫರಂಗಿಪೇಟೆ ಶಿಕ್ಷೆಗೆ ಒಳಗಾದ ಆರೋಪಿ. ನ್ಯಾಯಾಧೀಶರಾದ ರಾಮಲಿಂಗಪ್ಪ ಅವರು ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ (IPC) ಕಲಂ 153(A) ಅಡಿಯಲ್ಲಿ 6 ತಿಂಗಳ ಸಾದಾ ಕಾರಾಗೃಹ ವಾಸ ಹಾಗೂ ₹10,000 ದಂಡ ವಿಧಿಸಿ ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
2015ರ ಜುಲೈ 23ರಂದು ಬೆಳ್ತಂಗಡಿ ತಾಲೂಕು ಕಚೇರಿಯ ಬಳಿ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಬೆಳ್ತಂಗಡಿ ವಲಯದ ವತಿಯಿಂದ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ರಿಯಾಜ್ ಫರಂಗಿಪೇಟೆ, ಧಾರ್ಮಿಕ ಭಾವನೆ ಕೆರಳಿಸುವ ಹಾಗೂ ಸಮಾಜದಲ್ಲಿ ಶಾಂತಿ ಕದಡುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದರು.
ಅಂದಿನ ಬೆಳ್ತಂಗಡಿ ಪೊಲೀಸ್ ಎಸ್ ಐ ಹಾಗೂ ತನಿಖಾಧಿಕಾರಿಯಾಗಿದ್ದ ರವಿ ಬಿ.ಎಸ್. ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಆಶೀತಾ ಅವರು ವಾದ ಮಂಡಿಸಿದ್ದರು.
ಮೇಲ್ಮನವಿ ಸಲ್ಲಿಕೆ ಅವಕಾಶ : ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ ರಿಯಾಜ್ ಫರಂಗಿಪೇಟೆ ಅವರು District & Sessions Court ಗಳಿಗೆ ಮೇಲ್ಮನವಿ ಸಲ್ಲಿಸಬಹುದು.
ಸೆಷನ್ಸ್ ನ್ಯಾಯಾಲಯದಲ್ಲೂ ಹಿನ್ನಡೆಯಾದರೆ, ಪ್ರಕರಣದ ರದ್ದತಿಗೆ ಕರ್ನಾಟಕ ಹೈಕೋರ್ಟ್ಗೆ ಕ್ರಿಮಿನಲ್ ರಿವಿಷನ್ ಅರ್ಜಿ ಸಲ್ಲಿಸಬಹುದು


