ಬೋಳಿಯಾರ್ ಗ್ರಾಮ:ತಲೆತಲಾಂತರದ ಸೌಹಾರ್ದತೆಗೆ ಸಾಕ್ಷಿಯಾದ ಸಾಮರಸ್ಯದ ನೆಲೆ

ಬೋಳಿಯಾರ್:ನಮ್ಮೂರು ಬೋಳಿಯಾರ್ ಅಂದರೆ,ಅದು ಪ್ರೀತಿ, ಮತ್ತು ಸಾಮರಸ್ಯವನ್ನು ಹಂಚುವ ಸೌಹಾರ್ದತೆಯ ಸಂಕೇತ. ತಲೆತಲಾಂತರಗಳಿಂದಲೂ ಸೌಹಾರ್ದ ಸಹಬಾಳ್ವೆಗೆ ಹೆಸರುವಾಸಿಯಾದ ಈ ಗ್ರಾಮದಲ್ಲಿ, ನಮ್ಮ ಪೂರ್ವಿಕರು ಬಿಟ್ಟುಹೋದ ಪರಸ್ಪರ ವಿಶ್ವಾಸದ ಪ್ರೀತಿಯ ವಾತಾವರಣ ದಶಕಗಳು ಕಳೆದರೂ ಇಂದಿಗೂ ಹಾಗೆಯೇ ಜೀವಂತವಾಗಿದೆ.
ಜಾತಿ-ಧರ್ಮಗಳ ಹಂಗಿಲ್ಲದೆ, ಪರಸ್ಪರ ಕೊಡು-ಕೊಳ್ಳುವಿಕೆಯ ವ್ಯಾಪಾರ ಸಂಬಂಧ, ಎಲ್ಲರೂ ಒಂದಾಗಿ ಸಂಭ್ರಮಿಸುವ ಕ್ರೀಡಾಕೂಟಗಳು, ಮನೆಯ ಮದುವೆ ಸಮಾರಂಭದಿಂದ ಹಿಡಿದು ಮರಣದ ಮನೆಯ ದುಃಖದವರೆಗೂ ಬೋಳಿಯಾರ್‌ನ ಜನ ಸದಾ ಒಟ್ಟೊಟ್ಟಿಗೇ ನಿಲ್ಲುತ್ತಾರೆ. ಕಷ್ಟ-ಸುಖಕ್ಕೆ ಸ್ಪಂದಿಸುವ ಈ ಜೀವನಪದ್ಧತಿ ನಮ್ಮೂರಿನ ಹಿರಿಮೆಗೆ ಹಿಡಿದ ಕನ್ನಡಿ.
ಬೋಳಿಯಾರ್ ಜಂಕ್ಷನ್‌ನ ಶ್ರೀ ದೇವಿಪ್ರಸಾದ್ ಹೋಟೆಲ್‌ನ ವರಾಂಡ ಇಂದಿಗೂ ನಮ್ಮೂರಿನ ಸೌಹಾರ್ದ ಇತಿಹಾಸಕ್ಕೆ ಜೀವಂತ ಸಾಕ್ಷಿಯಾಗಿದೆ. ಪೋಸ್ಟ್ ಮಾಸ್ಟರ್ ಕೆ. ಮೊಹಮ್ಮದ್ (ರನ್ನರ್ ಬ್ಯಾರಿ) ಹಾಗೂ ದೇವಿಪ್ರಸಾದ್ ಹೋಟೆಲ್‌ನ ಸುಬ್ಬಯ್ಯ ಶೆಟ್ಟಿ (ಕುಟ್ಟಿಯಣ್ಣ) ಅವರ ಹೋಟೆಲ್‌ನಲ್ಲಿ ರಾಮಣ್ಣ ಪೂಜಾರಿ, ಇಸ್ಮಾಹಿಲ್ ಬ್ಯಾರಿ, ಬಾಡು ಮೊಗೇರ, ಡೇನಿಸ್ ಫರ್ನಾಂಡೀಸ್, ರಜಬ್ ಬ್ಯಾರಿ ಹೀಗೆ ಎಲ್ಲಾ ಜಾತಿ-ಧರ್ಮದ ಹಿರಿಯರು ಒಟ್ಟಿಗೆ ಕುಳಿತು ಹರಟೆ ಹೊಡೆಯುತ್ತಿದ್ದರು. ಹಾಸ್ಯ,ಪಂಚಾಯತಿಗಳು ನಡೆಯುತ್ತಿದ್ದ ಆ ಸ್ಥಳ ಇಂದಿಗೂ ನಮ್ಮ ಸಾಮರಸ್ಯದ ಗತಕಾಲವನ್ನು ನೆನಪಿಸುತ್ತದೆ.
ಇಂದಿನ ಬೋಳಿಯಾರ್ ಶಿಕ್ಷಣ ಪಡೆದು ಉನ್ನತ ಹುದ್ದೆಗೇರುತ್ತಿರುವ ಯುವ ತಲೆಮಾರಿನಿಂದ ಹಿಡಿದು, ಕೃಷಿಕರು, ಮೇಸ್ತ್ರಿ ಕೆಲಸಗಾರರು, ಕೂಲಿ ಕಾರ್ಮಿಕರು, ಚಾಲಕರು ಮತ್ತು ಸಣ್ಣ ವ್ಯಾಪಾರಿಗಳನ್ನೊಳಗೊಂಡ ಮಧ್ಯಮ ವರ್ಗದ ಕುಟುಂಬಗಳಿಂದ ಕೂಡಿದೆ. ಇಲ್ಲಿ ದೊಡ್ಡ ಶ್ರೀಮಂತಿಕೆ ಇಲ್ಲದಿರಬಹುದು, ಆದರೆ ಶ್ರಮವನ್ನು ನಂಬಿ, ಇದ್ದುದರಲ್ಲೇ ತೃಪ್ತಿಪಟ್ಟು ಸ್ವಾಭಿಮಾನದಿಂದ ಬದುಕುವ ದೊಡ್ಡ ಗುಣ ಪ್ರತಿಯೊಬ್ಬರಲ್ಲಿದೆ.
ನೆನಪಿನಲ್ಲಿ ಉಳಿದ ಸೌಹಾರ್ದ ಕ್ಷಣಗಳು:ಇಂದಿನ ಜಾಥಾ ಸಂದರ್ಭದಲ್ಲಿ ಮಂಜು ಮತ್ತು ತಂಡದವರು ತಂಪು ಪಾನೀಯ ಹಂಚುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ. ಹಾಗೆಯೇ ಕಳೆದ ಮಿಲಾದ್ ಹಬ್ಬದಲ್ಲಿ ತಂಪು ಪಾನೀಯ ಹಂಚಿ ಪ್ರೀತಿ ಹಂಚಿದ್ದ ಸತೀಶ್ ಅವರ ನೆನಪು ಈ ಸಂದರ್ಭದಲ್ಲಿ ಪ್ರತಿಯೊಬ್ಬರ ಮನದಲ್ಲೂ ಹಸಿರಾಗಿದೆ. ಇಂದು ಅವರು ನಮ್ಮೊಂದಿಗಿಲ್ಲದಿದ್ದರೂ, ಅವರು ಬಿಟ್ಟುಹೋದ ಸಾಮರಸ್ಯದ ನೆನಪುಗಳು ಎಂದೆಂದಿಗೂ ಶ್ರೇಷ್ಠ.
ನಮ್ಮ ಪೂರ್ವಜರು ಕಟ್ಟಿಕೊಟ್ಟ ಈ ಭವ್ಯ ಸೌಹಾರ್ದ ಪರಂಪರೆಯನ್ನು ಮುಂದಿನ ತಲೆಮಾರಿಗೂ ತಲುಪಿಸುವುದು ಮತ್ತು ಈ ಪ್ರೀತಿಯ ವಾತಾವರಣವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ.


