ಚಿತ್ರರಂಗದಿಂದ ನ್ಯಾಯಾಂಗ ಕ್ಷೇತ್ರದವರೆಗೆ: ರಮೇಶ್ ಅರವಿಂದ್ ಜೊತೆ ನಟಿಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಒಂದೇ ದಿನ 555 ಪ್ರಕರಣಗಳ ವಿಚಾರಣೆ ನಡೆಸಿ ದಾಖಲೆ ನಿರ್ಮಿಸಿದ್ದಾರೆ. ನ್ಯಾಯಾಂಗ ಸೇವೆಗೆ ಬರುವ ಮುನ್ನ, 27 ವರ್ಷಗಳ ಹಿಂದೆ ಅವರು ‘ಹೂಮಳೆ’ ಎಂಬ ಪ್ರಸಿದ್ಧ ಕನ್ನಡ ಚಿತ್ರದಲ್ಲಿ ನಟಿಸಿದ್ದರು ಎಂಬ ಕುತೂಹಲಕಾರಿ ಸಂಗತಿ ಈ ಲೇಖನದಲ್ಲಿದೆ.
ಕರ್ನಾಟಕ ಹೈಕೋರ್ಟ್‌ನ ಕೋರ್ಟ್ ಹಾಲ್ 14ರಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಸೆಪ್ಟೆಂಬರ್ 2 ರಂದು ರಾತ್ರಿ 8:05 ರವರೆಗೆ ಸತತವಾಗಿ ಪೀಠದಲ್ಲಿದ್ದು, ಒಟ್ಟು 555 ಪ್ರಕರಣಗಳ ಸುದೀರ್ಘ ವಿಚಾರಣೆ ನಡೆಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ದಿನದ ನಿಗದಿತ ಕಲಾಪಗಳ ಹೊರತಾಗಿ, ತುರ್ತು ವಿಚಾರಣೆಗೆ ಕೋರಿ ಸಲ್ಲಿಕೆಯಾಗಿದ್ದ 250 ಅರ್ಜಿಗಳನ್ನು ಕೇವಲ 2.5 ಗಂಟೆಗಳ ಅಲ್ಪಾವಧಿಯಲ್ಲಿ ಪರಿಶೀಲಿಸಿ ಆಲಿಸಿರುವುದು ಅತ್ಯಂತ ವಿಶೇಷವಾಗಿತ್ತು. ಅರ್ಜಿದಾರರಿಗೆ ಶೀಘ್ರ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾತ್ರಿಯವರೆಗೂ ಶ್ರಮಿಸಿದ ಅವರ ಕಾರ್ಯವೈಖರಿಗೆ ಕಾನೂನು ಕ್ಷೇತ್ರ ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತಮ್ಮದೇ ಆದ ವಿಶಿಷ್ಟ ಕಾರ್ಯಶೈಲಿಗೆ ಹೆಸರಾದವರು. ನ್ಯಾಯಾಲಯದ ಕಲಾಪಗಳನ್ನು ಜನರು ಆಸಕ್ತಿಯಿಂದ ವೀಕ್ಷಿಸುವಂತೆ ಮಾಡಿ, ಸಾರ್ವಜನಿಕರ ಅಪಾರ ಗೌರವಕ್ಕೆ ಪಾತ್ರರಾಗಿರುವ ಇವರ ವೃತ್ತಿಜೀವನದ ಹಿನ್ನೆಲೆಯಲ್ಲಿ ಇನ್ನೊಂದು ಕುತೂಹಲಕಾರಿ ಸಂಗತಿಯಿದೆ. ಈಗ ಆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಅದುವೆ ಅವರ ನಟನಾ ಪ್ರವೃತ್ತಿ. ನಾಗಪ್ರಸನ್ನ ಅವರು ಕಾನೂನು ವೃತ್ತಿಗೆ ಬರುವ ಮುನ್ನ ಕನ್ನಡದ ಖ್ಯಾತ ಚಲನಚಿತ್ರವೊಂದರಲ್ಲಿ ನಟಿಸಿದ್ದರು.
ಯಾವುದು ಆ ಚಿತ್ರ?
ನ್ಯಾಯಾಂಗ ಕ್ಷೇತ್ರಕ್ಕೆ ಪೂರ್ಣಪ್ರಮಾಣದಲ್ಲಿ ಧುಮುಕುವ ಮೊದಲು, ಅಂದರೆ 27 ವರ್ಷಗಳ ಹಿಂದೆ (1998 ರಲ್ಲಿ) ಅವರು ವಕೀಲರಾಗಿದ್ದಾಗ, ಕನ್ನಡದ ಜನಪ್ರಿಯ ಚಲನಚಿತ್ರ ‘ಹೂಮಳೆ’ಯಲ್ಲಿ ನಟಿಸಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಖ್ಯಾತ ನಟ ರಮೇಶ್ ಅರವಿಂದ್ ನಾಯಕನಾಗಿ ಹಾಗೂ ಸುಮನ್ ನಗರ್ಕರ್ ನಾಯಕಿಯಾಗಿ ಅಭಿನಯಿಸಿದ್ದರು.



