Ur Kannada News

ದಕ್ಷಿಣ ಕನ್ನಡ ಕಾಂಗ್ರೆಸ್‌ಗೆ ಹೊಸ ಸಾರಥಿ: ಪದ್ಮರಾಜ್ ಆರ್. ರಾಮಯ್ಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್. ರಾಮಯ್ಯ ಅವರನ್ನು ನೇಮಕಗೊಳಿಸಿ ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟಿಸುವ ಹಾಗೂ ಬಲಪಡಿಸುವ ಉದ್ದೇಶದಿಂದ ಈ ಪ್ರಮುಖ ಜವಾಬ್ದಾರಿಯನ್ನು ಪದ್ಮರಾಜ್ ಅವರಿಗೆ ವಹಿಸಲಾಗಿದ್ದು, ಕಳೆದ ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದರು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದಲ್ಲಿ ಮಂಗಳೂರು ಮೂಲದ ಎಚ್.ಎಂ. ರಾಮಯ್ಯ ಮತ್ತು ಲಲಿತಾ ದಂಪತಿಯ ದ್ವಿತೀಯ ಪುತ್ರನಾಗಿ ಜನಿಸಿದ ಪದ್ಮರಾಜ್ ಅವರ ಅಣ್ಣ ಡಾ. ಪುರುಷೋತ್ತಮ ಆರ್. ಅವರು ಪ್ರಸಿದ್ಧ ತಜ್ಞರಾಗಿದ್ದಾರೆ. ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಹುಟ್ಟೂರಿನಲ್ಲೇ ಮುಗಿಸಿದ ಅವರು, ಬಿ.ಎ. ಪದವಿಯನ್ನು ಮಡಂತ್ಯಾರಿನ ಸೆಕ್ರೇಡ್ ಹಾರ್ಟ್ ಕಾಲೇಜಿನಲ್ಲಿ ಹಾಗೂ ಕಾನೂನು ಪದವಿಯನ್ನು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಪೂರೈಸಿದರು. 1995ರಲ್ಲಿ ಕೇಂದ್ರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ ಅವರು, ನಾಲ್ಕು ವರ್ಷಗಳ ಬಳಿಕ ಮಂಗಳೂರಿನ ಬಳ್ಳಾಲ್‌ಬಾಗ್‌ನಲ್ಲಿ ಸ್ವಂತ ಕಚೇರಿಯನ್ನು ಪ್ರಾರಂಭಿಸಿದರು. ವೃತ್ತಿ ಜೀವನದ ಆರಂಭದಲ್ಲಿ ಹಿರಿಯ ವಕೀಲ ಪಿ. ಗಂಗಾಧರ್ ಅವರ ಸಲಹೆಯಂತೆ ಬಿಲ್ಲವರ ಯೂನಿಯನ್‌ನ ಸದಸ್ಯರಾದರು.

ಆರಂಭದಲ್ಲಿ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳದಿದ್ದರೂ, ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿಯವರ ಎಲ್ಲಾ ಚುನಾವಣೆಗಳ ಸಂದರ್ಭದಲ್ಲೂ ಅವರ ಜೊತೆ ನಿಂತು ಶ್ರಮಿಸಿದ್ದ ಪದ್ಮರಾಜ್, ಕಳೆದ 25 ವರ್ಷಗಳಿಂದ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾಗಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಬಿ. ಜನಾರ್ದನ ಪೂಜಾರಿಯವರ ಆದೇಶದಂತೆ ದಿನಂಪ್ರತಿ ದೇವಸ್ಥಾನದ ವತಿಯಿಂದ ಸುಮಾರು ಒಂದು ಸಾವಿರ ಬಡವರು, ನಿರಾಶ್ರಿತರು ಹಾಗೂ ವಲಸೆ ಕೂಲಿ ಕಾರ್ಮಿಕರಿಗೆ ಅನ್ನದಾನ ಸೇವೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಪದ್ಮರಾಜ್ ಅವರೇ ಖುದ್ದಾಗಿ ಸೇವಾದಳದೊಂದಿಗೆ ತೆರಳಿ ಅನ್ನದಾನ ವಿತರಿಸುತ್ತಿದ್ದರು. ಇವರ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ದೇವಸ್ಥಾನದ ವತಿಯಿಂದ 409 ಕ್ವಿಂಟಾಲ್ ಅಕ್ಕಿದಾನ ಮಾಡಲಾಗಿತ್ತು. ಎರಡನೇ ಲಾಕ್‌ಡೌನ್ ಸಂದರ್ಭದಲ್ಲೂ ತಮ್ಮ ‘ಗುರುಬೆಳದಿಂಗಳು ಫೌಂಡೇಶನ್’ ಮೂಲಕ ಸಹಸ್ರಾರು ನೊಂದ ಕುಟುಂಬಗಳಿಗೆ ದಿನಸಿ ಮತ್ತು ಆಹಾರ ಸಾಮಗ್ರಿ ತಲುಪಿಸುವ ಬೃಹತ್ ಮಹತ್ಕಾರ್ಯವನ್ನು ಕೈಗೊಂಡಿದ್ದರು.

ಇವರ ನೇಮಕಕ್ಕೆ ಜಿಲ್ಲೆಯ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ತೀವ್ರ ಸಂತಸ ವ್ಯಕ್ತಪಡಿಸಿದ್ದು, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.

Leave a Reply

Your email address will not be published. Required fields are marked *