🟧ರಾಜ್ಯದಲ್ಲೇ ಅತಿ ಹೆಚ್ಚು ಮಳೆ ರಜೆ ಘೋಷಿಸಿದ ಜಿಲ್ಲೆ ದಕ್ಷಿಣ ಕನ್ನಡ: ಇನ್ನು ತಾಲೂಕುವಾರು ರಜೆ ವ್ಯವಸ್ಥೆ? ದಕ್ಷಿಣಕನ್ನಡದಲ್ಲಿ ಈ ನಿಯಮ ಜಾರಿ ಸಾಧ್ಯತೆ, ಕಾರಣ ಏನು ಗೊತ್ತಾ?
ಮಳೆ ಎಂದು ಅಲರ್ಟ್ ನೀಡಿ ರಜೆ ನೀಡಿದ ದಿನ ಮಳೆ ಬಾರದೆ, ಬೇರೆ ದಿನಗಳಲ್ಲಿ ಅಥವಾ ಕೆಲವು ಕಡೆಗಳಲ್ಲಿ ಮಾತ್ರ ಮಳೆಯಾಗುತ್ತಿದೆ. ಹೀಗಾಗಿ ಇಡೀ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಬದಲು , ತಹಶೀಲ್ದಾರ್ ಮಟ್ಟದಲ್ಲಿ ಇದನ್ನು ತೀರ್ಮಾನಿಸಲು ಚಿಂತನೆ
ಮಂಗಳೂರು: ರಾಜ್ಯದಲ್ಲೇ ಈ ಬಾರಿ ಅತಿ ಹೆಚ್ಚು ಮಳೆ ರಜೆ ಘೋಷಿಸಿದ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ ಮುಂಚೂಣಿಯಲ್ಲಿದೆ. ಆದರೆ ಭಾರತೀಯ ಹವಾಮಾನ ಇಲಾಖೆ ನೀಡಿದ ಮಳೆ ಮುನ್ಸೂಚನೆ ಹಲವು ಬಾರಿ ವಾಸ್ತವ ಸ್ಥಿತಿಗೆ ಹೊಂದಿಕೆಯಾಗದ ಹಿನ್ನೆಲೆಯಲ್ಲಿ ಅಗತ್ಯವಿಲ್ಲದ ರಜೆಗಳಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಧಕ್ಕೆ ಉಂಟಾಗಿದೆ ಎಂಬ ಆಕ್ಷೇಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಬದಲಿಗೆ ತಾಲೂಕುವಾರು ಮಳೆ ರಜೆ ಘೋಷಿಸುವ ಕುರಿತು ಜಿಲ್ಲಾಡಳಿತ ಗಂಭೀರ ಚಿಂತನೆ ನಡೆಸಿದೆ.
ಏಕೆ ಬದಲಾವಣೆ?
ಈ ಬಾರಿ ಜಿಲ್ಲೆಯಲ್ಲಿ ಘೋಷಿಸಲಾದ ಏಳು ಮಳೆ ರಜೆಗಳಲ್ಲೂಎಲ್ಲ ತಾಲೂಕುಗಳಲ್ಲೂ ಒಂದೇ ರೀತಿಯ ಪರಿಸ್ಥಿತಿ ಇರಲಿಲ್ಲ. ಕೆಲವು ಭಾಗಗಳಲ್ಲಿ ಭಾರಿ ಮಳೆಯಿದ್ದರೆ, ಹಲವು ಕಡೆ ಸಾಮಾನ್ಯ ಮಳೆಯಷ್ಟೇ ದಾಖಲಾಗಿತ್ತು. ಆದರೂ ಇಡೀ ಜಿಲ್ಲೆಗೆ ರಜೆ ಘೋಷಿಸಿದ್ದರಿಂದ ಅನಗತ್ಯವಾಗಿ ಶಿಕ್ಷಣಕ್ಕೆ ಅಡ್ಡಿಯಾಯಿತು ಎಂಬ ಟೀಕೆ ಶೈಕ್ಷಣಿಕ ಸಂಸ್ಥೆಗಳ ಜತೆಗೆ ಶಿಕ್ಷಣ ತಜ್ಞರು ಮುಂದಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ತಹಸೀಲ್ದಾರ್, ಬಿಇಒ ಸೇರಿದಂತೆ ಸ್ಥಳೀಯ ಅಧಿಕಾರಿಗಳ ವರದಿ ಆಧರಿಸಿ, ಯಾವ ತಾಲೂಕಿನಲ್ಲಿ ಅಪಾಯದ ಪರಿಸ್ಥಿತಿ ಇದೆಯೋ ಅಲ್ಲಿ ಮಾತ್ರ ರಜೆ ಘೋಷಿಸುವ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಚರ್ಚೆ ನಡೆದಿದೆ.
ಜಿಲ್ಲಾಧಿಕಾರಿ ಏನಂತಾರೆ?
ಈ ಕುರಿತು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ, ಐಎಂಡಿ ಮುನ್ಸೂಚನೆ ನೀಡಿದಾಗ ಮಕ್ಕಳ ಸುರಕ್ಷತೆಯೇ ಮೊದಲ ಆದ್ಯತೆ. ಶಿಕ್ಷಣ ಎಷ್ಟು ಮುಖ್ಯವೋ, ಮಕ್ಕಳ ಜೀವವೂ ಅಷ್ಟೇ ಅಮೂಲ್ಯ. ಆದರೆ ಮುಂದಿನ ದಿನಗಳಲ್ಲಿ ತಾಲೂಕುವಾರು ರಜೆ ಘೋಷಿಸುವ ವ್ಯವಸ್ಥೆ ಜಾರಿಗೆ ತರುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.
ನೋಟಿಸ್‌ಗೆ ಕ್ಷಮಾಪಣಾ ಪತ್ರ:
ಮಳೆ ರಜೆ ಘೋಷಿಸಿದ್ದರೂ ನಿಯಮ ಉಲ್ಲಂಘಿಸಿ ತರಗತಿ ನಡೆಸಿದ 10 ಶಾಲೆ- ಕಾಲೇಜುಗಳಿಗೆ ಜಿಲ್ಲಾಡಳಿತ ನೋಟಿಸ್ ನೀಡಿತ್ತು. ಇದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಂಸ್ಥೆಗಳು ಕ್ಷಮಾಪಣಾ ಪತ್ರ ಸಲ್ಲಿಸಿ, ಇನ್ನು ಮುಂದೆ ನಿಯಮ ಪಾಲಿಸುವುದಾಗಿ ಲಿಖಿತ ಭರವಸೆ ನೀಡಿದೆ.
ಇದೇ ವೇಳೆ, ಕಳೆದ ಮೂರು ದಿನಗಳಲ್ಲೂ ಕೆಲ ಶಾಲೆ ಹಾಗೂ ಪಿಯು ಕಾಲೇಜುಗಳು ತರಗತಿ ನಡೆಸಿರುವ ಕುರಿತು ದೂರುಗಳು ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಕೆಲವು ಕಡೆ ಅಧಿಕಾರಿಗಳು ಸ್ಥಳಕ್ಕೇ ತೆರಳಿ ತರಗತಿಗಳನ್ನು ಸ್ಥಗಿತಗೊಳಿಸಿರುವುದಾಗಿ ಮೂಲಗಳು ತಿಳಿಸಿವೆ.
ಶೈಕ್ಷಣಿಕ ಸಂಸ್ಥೆಗಳ ವಿರೋಧ ಏನು?
ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ ಹಬ್ ಆಗಿದ್ದು, ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪದೇಪದೇ ಮಳೆ ರಜೆ ಘೋಷಿಸುವುದರಿಂದ ಪಠ್ಯಕ್ರಮ ಹಿಂದುಳಿಯುತ್ತಿದೆ, ಪರೀಕ್ಷಾ ವೇಳಾಪಟ್ಟಿಗೆ ಅಡ್ಡಿಯಾಗುತ್ತಿದೆ, ವಸತಿ ಶಾಲೆಗಳ ವಿದ್ಯಾರ್ಥಿಗಳು ದಿನಗಟ್ಟಲೆ ಹಾಸ್ಟೆಲ್‌ಗಳಲ್ಲೇ ಉಳಿಯಬೇಕಾಗುತ್ತಿದೆ, ಹೊರ ಜಿಲ್ಲೆಗಳ ವಿದ್ಯಾರ್ಥಿಗಳು ಮತ್ತು ಪೋಷಕರಿಗೂ ಅನಾನುಕೂಲವಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಶಾಲೆ-ಕಾಲೇಜುಗಳ ಮಳೆ ರಜೆ ಇನ್ನು ತಾಲೂಕುವಾರು? ದಕ್ಷಿಣ ಕನ್ನಡದಲ್ಲಿ ಶೀಘ್ರ ಈ ನಿಯಮ ಜಾರಿ ಸಾಧ್ಯತೆ, ಕಾರಣ ಏನು ಗೊತ್ತಾ?
