Ur Kannada News

ರಿಕವರಿ ಹೆಸರಲ್ಲಿ ಗೂಂಡಾಗಿರಿ ವರ್ಕೌಟ್ ಆಗಲ್ಲ: ಚೋಳಮಂಡಲಂ ಫೈನಾನ್ಸ್‌ಗೆ ಸುಪ್ರೀಂ ಕೋರ್ಟ್ ₹15 ಲಕ್ಷ ದಂಡ 

ನವದೆಹಲಿ: ಸಾಲದ ಕಂತು ಪಾವತಿಸದ ಕಾರಣಕ್ಕಾಗಿ ತೋಳ್ಬಲ ಹಾಗೂ ರಿಕವರಿ ಏಜೆಂಟ್‌ಗಳನ್ನು ಬಳಸಿ ಅಕ್ರಮವಾಗಿ ವಾಹನ ಜಪ್ತಿ ಮಾಡಿದ ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಅಂಡ್ ಫೈನಾನ್ಸ್ ಸಂಸ್ಥೆಗೆ ಸುಪ್ರೀಂ ಕೋರ್ಟ್ 15 ಲಕ್ಷ ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರಿದ್ದ ದ್ವಿಪೀಠವು ಈ ಆದೇಶವನ್ನು ಹೊರಡಿಸಿದೆ.

ಪ್ರಕರಣದ ವಿವರಗಳ ಪ್ರಕಾರ, ಟ್ರಕ್ ಮಾಲೀಕರೊಬ್ಬರು 10.4 ಲಕ್ಷ ರೂಪಾಯಿ ಸಾಲ ಪಡೆದು ವಾಹನ ಖರೀದಿಸಿದ್ದರು. ಸಾಲದ ಕಂತು ಬಾಕಿ ಉಳಿಸಿಕೊಂಡಿದ್ದಕ್ಕಾಗಿ ಏಪ್ರಿಲ್ 9, 2023 ರಂದು ಅಯೋಧ್ಯೆಯಲ್ಲಿದ್ದ ಗೋದಾಮಿನಲ್ಲಿದ್ದ ಟ್ರಕ್ ಅನ್ನು ಬೆಳಗಿನ ಜಾವ 1 ಗಂಟೆಗೆ ನಾಲ್ವರು ವ್ಯಕ್ತಿಗಳು ಸ್ಟೀರಿಂಗ್ ಲಾಕ್ ಮುರಿದು ರಹಸ್ಯವಾಗಿ ಚಾಲನೆ ಮಾಡಿಕೊಂಡು ಹೋಗಿದ್ದರು. ಈ ಸಂಪೂರ್ಣ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತದನಂತರ ಆರು ತಿಂಗಳ ಬಳಿಕ ಯಾವುದೇ ಪೂರ್ವಸೂಚನೆ ನೀಡದೆ ವಾಹನವನ್ನು 4.5 ಲಕ್ಷ ರೂಪಾಯಿಗೆ ಹರಾಜು ಹಾಕಿದ್ದ ಫೈನಾನ್ಸ್ ಸಂಸ್ಥೆಯು, ಇನ್ನುಳಿದ 1.3 ಲಕ್ಷ ರೂಪಾಯಿ ಬಾಕಿ ಮೊತ್ತವನ್ನು ಪಾವತಿಸುವಂತೆ ಮಾಲೀಕರಿಗೆ ನೋಟಿಸ್ ಕಳುಹಿಸಿತ್ತು.

ಈ ಅಕ್ರಮ ನಡೆಯನ್ನು ಖಂಡಿಸಿದ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಹಾಗೂ ಅಲೋಕ್ ಆರಾಧೆ ಅವರಿದ್ದ ಪೀಠವು, ಅಡಮಾನವಿಟ್ಟ ವಾಹನವನ್ನು ಹಿಂಪಡೆಯುವುದು ಹಣಕಾಸು ಸಂಸ್ಥೆಗಳ ಕಾನೂನುಬದ್ಧ ಹಕ್ಕಾಗಿದ್ದರೂ, ಅದನ್ನು ನಿಯಮಬಾಹಿರವಾಗಿ ಅಥವಾ ರಹಸ್ಯವಾಗಿ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಮೇ 5, 2003 ರಂದು ರಿಸರ್ವ್ ಬ್ಯಾಂಕ್ ಹೊರಡಿಸಿರುವ ‘ನ್ಯಾಯಯುತ ವ್ಯವಹಾರ ಸಂಹಿತೆ’ಯ ಪ್ರಕಾರ ನೋಟಿಸ್ ನೀಡಿ ನಿಯಮಾವಳಿಗಳ ಮರುಸ್ವಾಧೀನ ಪ್ರಕ್ರಿಯೆ ನಡೆಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದೆ.

ಅಂತಿಮವಾಗಿ, ಸಂತ್ರಸ್ತ ಟ್ರಕ್ ಮಾಲೀಕರ ಸಾಲದ ಖಾತೆಯನ್ನು ತಕ್ಷಣವೇ ಮುಕ್ತಾಯಗೊಳಿಸಲು, ಹರಾಜು ಮೊತ್ತವನ್ನು ಬಡ್ಡಿಯೊಂದಿಗೆ ಮರಳಿಸಲು ಹಾಗೂ ಮಾನಸಿಕ ಕಿರುಕುಳಕ್ಕೆ ಪರಿಹಾರವಾಗಿ ಒಟ್ಟು ಸುಮಾರು 15 ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ಚೋಳಮಂಡಲಂ ಫೈನಾನ್ಸ್ ಸಂಸ್ಥೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.

Leave a Reply

Your email address will not be published. Required fields are marked *