ಪ್ಲಾಟ್ ಅಪ್ರೂವಲ್ಗೆ ಹೊಸ ರೂಲ್ಸ್: ಈಗ ಪಂಚಾಯತ್, ಪುರಸಭೆಯಲ್ಲೇ ಸಿಗಲಿದೆ ನಕ್ಷೆ ಮಂಜೂರಾತಿ,1000 Sq Mtr. PDO, ಪುರಸಭೆ ಆಯುಕ್ತರಿಗೇ ನೇರ ಅಧಿಕಾರ, ನಕ್ಷೆ ಮಂಜೂರಾತಿ ಇನ್ಮುಂದೆ ಸುಲಭ
ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ದಿನಾಂಕ ೨೪.೦೯.೨೦೨೬ ರಂದು ಹೊರಡಿಸಿರುವ ನೂತನ ಅಧಿಸೂಚನೆ ಪ್ರಕಾರ, ಸಾರ್ವಜನಿಕರ ಅನುಕೂಲ ಹಾಗೂ ಆಡಳಿತಾತ್ಮಕ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ೧,೦೦೦ ಚದರ ಮೀಟರ್ (ಸುಮಾರು ೧೦,೭೬೪ ಚದರ ಅಡಿ) ವರೆಗಿನ “ಸಿಂಗಲ್ ಪ್ಲಾಟ್” (Single Plot) ಲೇಔಟ್ ನಕ್ಷೆ ಮಂಜೂರಾತಿ ನೀಡುವ ಅಧಿಕಾರವನ್ನು ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ವಹಿಸಲಾಗಿದೆ.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ, ೧೯೬೧ ರ ಸೆಕ್ಷನ್ ೮೧ ರ ಅಡಿಯಲ್ಲಿ ಲಭ್ಯವಿರುವ ಅಧಿಕಾರವನ್ನು ಬಳಸಿ ಈ ಆದೇಶ ಹೊರಡಿಸಲಾಗಿದ್ದು, ಇನ್ಮುಂದೆ ಈ ವ್ಯಾಪ್ತಿಯ ಪ್ಲಾಟ್ಗಳಿಗೆ ಮಹಾನಗರ ಪಾಲಿಕೆಯ ವಲಯ ಆಯುಕ್ತರು, ನಗರಸಭೆಗಳ ಆಯುಕ್ತರು, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳು ನೇರವಾಗಿ ನಕ್ಷೆ ಅನುಮೋದನೆ ನೀಡಲಿದ್ದಾರೆ.
ಈ ವಿಕೇಂದ್ರೀಕರಣದಿಂದಾಗಿ ಸಣ್ಣ ಮನೆ ಅಥವಾ ಜಾಗ ಹೊಂದಿರುವ ಸಾರ್ವಜನಿಕರು ನಗರಾಭಿವೃದ್ಧಿ ಪ್ರಾಧಿಕಾರಗಳ ಕಚೇರಿಗಳಿಗೆ ಅಲೆಯುವುದು ತಪ್ಪಲಿದ್ದು, ತಮ್ಮ ವ್ಯಾಪ್ತಿಯ ಸ್ಥಳೀಯಾಡಳಿತ ಕಚೇರಿಗಳಲ್ಲೇ ಶೀಘ್ರವಾಗಿ ಲೇಔಟ್ ನಕ್ಷೆ ಮಂಜೂರಾತಿ ಪಡೆಯಲು ಸಾಧ್ಯವಾಗಲಿದೆ.
