ಬಂಟ್ವಾಳ ವಕೀಲರ ಸಂಘದಲ್ಲಿ ಹಿರಿಯ ವಕೀಲರಾದ ಶ್ರೀಧರ್ ಪೈ ಮತ್ತು ಸುರೇಶ್ ಪೂಜಾರಿ ಅವರ ಹುಟ್ಟುಹಬ್ಬದ ಸಂಭ್ರಮ.
ಬಂಟ್ವಾಳ: ಬಂಟ್ವಾಳ ವಕೀಲರ ಸಂಘದ ವತಿಯಿಂದ ಹಿರಿಯ ವಕೀಲರು ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಶ್ರೀಧರ್ ಪೈ ಮತ್ತು ಶ್ರೀ ಸುರೇಶ್ ಪೂಜಾರಿ ಅವರ ಜನ್ಮದಿನದ ಆಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಯೋಜಿಸಲಾಯಿತು.
ಯಾವುದೇ ಒಳ್ಳೆಯ ಕೆಲಸಕ್ಕೂ ಮುಂಚೂಣಿಯಲ್ಲಿ ನಿಂತು ಬೆಂಬಲ ನೀಡುವ ಸುರೇಶ್ ಪೂಜಾರಿ ಅವರು ಎಲ್ಲರ ನೆಚ್ಚಿನ ನಾಯಕರಾಗಿದ್ದು, ಬಂಟ್ವಾಳ ನ್ಯಾಯಾಲಯದ ಹೊಸ ಕಟ್ಟಡದ ನಿರ್ಮಾಣಕ್ಕೆ ಶ್ರಮಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ತಮ್ಮ ಅಧಿಕಾರದ ಅವಧಿಯಲ್ಲಿ ಅತ್ಯುತ್ತಮವಾಗಿ ಆಡಳಿತ ನಡೆಸಿ ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದ ಸಂಘಟಕರಾಗಿದ್ದಾರೆ.
ಅಂತೆಯೇ, ಮತ್ತೊಬ್ಬ ಮಾಜಿ ಅಧ್ಯಕ್ಷರಾದ ಶ್ರೀಧರ ಪೈ ಅವರು ಸದಾ ಹಸನ್ಮುಖಿಯಾಗಿದ್ದು, ಪ್ರತಿಯೊಬ್ಬರೊಂದಿಗೂ ಪ್ರೀತಿ- ಗೌರವದಿಂದ ಬೆರೆತು ನಡೆಯುವ ಅಪರೂಪದ ವ್ಯಕ್ತಿತ್ವದವರಾಗಿದ್ದಾರೆ. ಈ ಇಬ್ಬರು ವಕೀಲರ ಜನ್ಮದಿನವನ್ನು ವಕೀಲ ಮಿತ್ರರೆಲ್ಲರೂ ಸೇರಿ ಸಂಭ್ರಮದಿಂದ ಆಚರಿಸಿ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ವಕೀಲರಾದ ಮೋಹನ್ ಹಾಗೂ ವಕೀಲರಾದ ಗಝಾಲಿ ಅವರು ಮಾತನಾಡುತ್ತಾ, ಹಿರಿಯ ವಕೀಲರ ವೃತ್ತಿಜೀವನದ ಸಾಧನೆಗಳು, ಕಿರಿಯರ ಜೊತೆಗಿನ ಉತ್ತಮ ಬಾಂಧವ್ಯ ಮತ್ತು ಸಂಘಕ್ಕೆ ಅವರು ಸಲ್ಲಿಸಿರುವ ಸೇವೆಯನ್ನು ಸ್ಮರಿಸಿ ಹುಟ್ಟುಹಬ್ಬದ ಶುಭ ಹಾರೈಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಹಿರಿಯ ವಕೀಲರಾದ ಚಂದ್ರಶೇಖರ್ ಪುಂಚಮೆ ಅವರು ನಿರ್ವಹಿಸಿದರು.
ಈ ಕಾರ್ಯಕ್ರಮದಲ್ಲಿ ವಕೀಲರಾದ ದಯಾನಂದ ರೈ, ಶೋಭಾಲತಾ, ಪ್ರಸಾದ್ ಕುಮಾರ್ ರೈ, ಸುರೇಶ್ಕುಮಾರ್ ನಾವೂರ್ ಸೇರಿದಂತೆ ಸಂಘದ ಹಿರಿಯ ಹಾಗೂ ಕಿರಿಯ ವಕೀಲರು ಮತ್ತು ಸದಸ್ಯರು ಉಪಸ್ಥಿತರಿದ್ದು ಹಿರಿಯ ವಕೀಲರಿಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಉಪಹಾರ ಹಾಗೂ ಸಿಹಿ ತಿಂಡಿಯ ಪೊಟ್ಟಣಗಳನ್ನು ವಿತರಿಸಲಾಯಿತು. ಈ ಆಚರಣೆಯಲ್ಲಿ ಬಂಟ್ವಾಳ ನ್ಯಾಯಾಲಯದ ಹಿರಿಯ ಹಾಗೂ ಯುವ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.





