ನೂರಾರು ಯುವಕರ ಬದುಕು ರೂಪಿಸಿದ ಸಂಪನ್ಮೂಲ ವ್ಯಕ್ತಿ ರಫೀಕ್ ಮಾಸ್ಟರ್ಗೆ ಒಲಿದ ಜಿಲ್ಲಾ ಪ್ರಶಸ್ತಿ
ಮಂಗಳೂರು: ಸಮಾಜದಲ್ಲಿ ಕೆಲ ವ್ಯಕ್ತಿಗಳು ತಮ್ಮ ವೃತ್ತಿಯ ಮೂಲಕ ಮಾತ್ರವಲ್ಲದೆ, ತಮ್ಮ ವ್ಯಕ್ತಿತ್ವ, ನಿಸ್ವಾರ್ಥ ಸೇವೆ ಮತ್ತು ಜನರ ಮೇಲಿನ ಕಾಳಜಿಯಿಂದ ವಿಶಿಷ್ಟ ಸ್ಥಾನವನ್ನು ಗಳಿಸುತ್ತಾರೆ. ಅಂತಹ ಸ್ಫೂರ್ತಿದಾಯಕ ವ್ಯಕ್ತಿತ್ವಗಳಲ್ಲಿ ಮುಂಚೂಣಿಯಲ್ಲಿರುವ ಶಿಕ್ಷಣ ಪ್ರೇಮಿ ರಫೀಕ್ ಮಾಸ್ಟರ್ಅವರಿಗೆ ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ – 2026 ಲಭಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ದೀರ್ಘಕಾಲದ ಗಣನೀಯ ಸೇವೆಯನ್ನು ಗುರುತಿಸಿ ಈ ಗೌರವ ಒಲಿದುಬಂದಿದೆ.
ಉತ್ತಮ ಶಿಕ್ಷಕರು ಪಾಠವನ್ನು ಮಾತ್ರ ಕಲಿಸುವುದಿಲ್ಲ, ಬದಲಾಗಿ ಬದುಕನ್ನು ರೂಪಿಸುತ್ತಾರೆ ಎಂಬುದಕ್ಕೆ ರಫೀಕ್ ಮಾಸ್ಟರ್ ಜೀವಂತ ಉದಾಹರಣೆಯಾಗಿದ್ದಾರೆ. ಪೋಷಕರು, ಶಿಕ್ಷಕರು, ಸಮಾಜ ಸೇವಕರು ಮತ್ತು ಯುವ ಸಮುದಾಯಕ್ಕೆ ನೂರಾರು ತರಬೇತಿಗಳನ್ನು ನೀಡಿರುವ ಇವರು, ಅನೇಕರ ಆಲೋಚನಾ ಕ್ರಮ ಹಾಗೂ ದೃಷ್ಟಿಕೋನವನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸದಾ ಇನ್ನೊಬ್ಬರ ಯಶಸ್ಸಿಗೆ ಹಾತೊರೆಯುವ ಇವರು, ಅನೇಕ ಯುವಕರ ಬದುಕಿಗೆ ದಿಕ್ಕು ತೋರಿಸಿದ ನಿಜವಾದ ಮಾರ್ಗದರ್ಶಕರಾಗಿದ್ದಾರೆ.
ಶಿಕ್ಷಣದ ಜೊತೆಗೆ ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ ಮತ್ತು ಸಾಮಾಜಿಕ ಜವಾಬ್ದಾರಿಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿರುವ ಇವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ಈಗಾಗಲೇ ‘ಬೆಸ್ಟ್ ಬ್ಯಾರಿ ಅವಾರ್ಡ್’ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಭಾಜನರಾಗಿರುವ ರಫೀಕ್ ಮಾಸ್ಟರ್ ಅವರಿಗೆ, ಈಗ ಲಭಿಸಿರುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ಇವರ ಸಮಾಜಮುಖಿ ಕೆಲಸಗಳಿಗೆ ಸಿಕ್ಕ ಮತ್ತೊಂದು ದೊಡ್ಡ ಸಾರ್ವಜನಿಕ ಮಾನ್ಯತೆಯಾಗಿದೆ.



