Ur Kannada News

ಕುಡುಪುವಿನಲ್ಲಿ ಅಶ್ರಫ್ ಹತ್ಯೆ ಪ್ರಕರಣ | ಸಂತ್ರಸ್ತರಿಗೆ ಪರಿಹಾರ ಯೋಜನೆ ರೂಪಿಸಿ-ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ 90 ದಿನದ ಗಡುವು ನೀಡಿದ ಹೈಕೋರ್ಟ್

ಬೆಂಗಳೂರು: ಮಂಗಳೂರು ಗುಂಪು ಹತ್ಯೆ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಮೃತ ಅಶ್ರಫ್ ಸಹೋದರ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ಹೈಕೋರ್ಟ್, ಗುಂಪು ಹಲ್ಲೆ ಮತ್ತು ಹತ್ಯೆಯಲ್ಲಿ ಸಾವನ್ನಪ್ಪಿದವರ ಕುಟುಂಬದವರಿಗೆ ಪರಿಹಾರದ ನೀಡುವ ಸಂಬಂಧ ಸುಪ್ರೀಂಕೋರ್ಟ್ ಮಾರ್ಗಸೂಚಿಯಂತೆ ಮೂರು ತಿಂಗಳಲ್ಲಿ ಯೋಜನೆ ರೂಪಿಸುವಂತೆ ನಿರ್ದೇಶಿಸಿದೆ.

ರಾಜ್ಯ ಸರ್ಕಾರ ಮತ್ತು ಮೃತನ ಸಹೋದರ ಅಬ್ದುಲ್ ಜಬ್ಬಾರ್ ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿದ ನ್ಯಾಯಮೂರ್ತಿ ವಿಜಯಕುಮಾರ್ ಎ.ಪಾಟೀಲ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ. ಆದೇಶದ ಸಂಬಂಧ ಅನುಪಾಲನಾ ವರದಿ ಸಲ್ಲಿಸಲು ಆದೇಶಿಸಿದೆ.

ಅಲ್ಲದೇ, ಪ್ರಕರಣದಲ್ಲಿ ಈಗಾಗಲೇ ಆರೋಪಪಟ್ಟಿ ಸಲ್ಲಿಕೆಯಾಗಿರುವುದರಿಂದ ಆರೋಪಿಗಳನ್ನು ವಶಕ್ಕೆ ಪಡೆಯುವ ಅಗತ್ಯವಿಲ್ಲ ಎಂಬ ಆಧಾರದಲ್ಲಿ ಜಾಮೀನು ರದ್ದುಪಡಿಸಲು ಸಾಧ್ಯವಿಲ್ಲ. ಜೊತೆಗೆ, ಈ ಹಂತದಲ್ಲಿ ಜಾಮೀನು ಅರ್ಜಿ ವಜಾಗೊಳಿಸಿ ಹೊಸದಾಗಿ ಅವುಗಳನ್ನು ಪರಿಗಣಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಆದೇಶಿಸುವುದರಿಂದ ವಿಚಾರಣೆ ವಿಳಂಬವಾಗುತ್ತದೆ. ಅಲ್ಲದೇ, ಗುಂಪು ಹತ್ಯೆ ಪ್ರಕರಣಗಳನ್ನು ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥಪಡಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಹಾಗಾಗಿ ಈ ಅರ್ಜಿಗಳನ್ನು ತಿರಸ್ಕರಿಸಲಾಗದು ಎಂದು ಪೀಠ ಹೇಳಿದೆ.

ಸುಪ್ರೀಂಕೋರ್ಟ್ ಮಾರ್ಗಸೂಚಿಗಳು ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ಲೆಕ್ಕಾಚಾರ ಮಾಡಲು ಒಂದು ಯೋಜನೆಯನ್ನು ರೂಪಿಸುವುದನ್ನು ಕಡ್ಡಾಯಗೊಳಿಸುತ್ತದೆ. ಅಲ್ಲದೇ, ಅರ್ಜಿದಾರರೂ ಕೂಡ ಗುಂಪು ಗಲಭೆ ಅಥವಾ ಹತ್ಯೆಯ ಘಟನೆ ನಡೆದ 30 ದಿನಗಳೊಳಗೆ ಸಂತ್ರಸ್ತರಿಗೆ ಅಥವಾ ಮೃತರ ಹತ್ತಿರದ ಸಂಬಂಧಿಗಳಿಗೆ ಮಧ್ಯಂತರ ಪರಿಹಾರವನ್ನು ಪಾವತಿಸಲು ಈ ಯೋಜನೆಯನ್ನು ರೂಪಿಸಿಲ್ಲ ಎಂಬುದಾಗಿ ವಾದಿಸಿದ್ದಾರೆ. ಆದರೆ ಮಧ್ಯಂತರ ಪರಿಹಾರವನ್ನು ನೀಡುವ ಯಾವುದೇ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿಲ್ಲ. ಹಾಗಾಗಿ ಸರ್ಕಾರ ಮೊದಲು ಯೋಜನೆ ರೂಪಿಸಬೇಕು ಎಂದು ಪೀಠ ತಿಳಿಸಿದೆ.

ಜೊತೆಗೆ ಗುಂಪು ಹಲ್ಲೆ ಮತ್ತ ಹತ್ಯೆ ತಡೆಯಲು ಜಿಲ್ಲಾಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇಮಕಾತಿ, ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವುದು, ನಿಯಮಿತ ಪೊಲೀಸ್ ಗಸ್ತು, ತಕ್ಷಣಕ್ಕೆ ಎಫ್ಐಆರ್ ದಾಖಲಿಸುವುದನ್ನು ಕಟ್ಟು ನಿಟ್ಟುಗೊಳಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಇಂತಹ ಗುಂಪು ಕೃತ್ಯಗಳನ್ನು ತಡೆಯಲು, ಹತ್ತಿಕ್ಕಲು ವಿಫಲವಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಈ ಆದೇಶವನ್ನು ಪಾಲಿಸಲು ಆದೇಶದ ಪ್ರತಿಯನ್ನು ಎಲ್ಲ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯಗಳಿಗೆ ಕಳುಹಿಸಿಕೊಡಬೇಕು ಮತ್ತು ಸಂತ್ರಸ್ತರನ್ನು ಪ್ರಕರಣದಲ್ಲಿ ಪಾರ್ಟಿಗಳನ್ನಾಗಿ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಮಂಗಳೂರು ತಾಲೂಕಿನ ಕುಡುಪು ಗ್ರಾಮದ ಭಟ್ರ ಕಲ್ಲುರ್ಟಿ ದೇವಸ್ಥಾನದ ಹಿಂಬದಿಯಲ್ಲಿರುವ ಮೈದಾನದಲ್ಲಿ 2025ರ ಏ.27ರಂದು ಕ್ರಿಕೆಟ್ ಪಂದ್ಯ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಚಿಂದಿ ಆಯುವ ಮೊಹಮ್ಮದ್ ಅಶ್ರಫ್ ‘ಪಾಕಿಸ್ತಾನ್ ಪಾಕಿಸ್ತಾನ್’ ಎಂದು ಜೋರಾಗಿ ಕೂಗುತ್ತಾ ಬರುತ್ತಿರುದ್ದರು ಎಂದು ಆರೋಪಿಸಿ ಕ್ರಿಕೆಟ್ ಆಡಲು ಮತ್ತು ಅದನ್ನು ನೋಡಲು ಬಂದಿದ್ದವರು ಏಕಾಏಕಿ ಹಲ್ಲೆ ನಡೆಸಿ ಗಾಯಗೊಳಿಸಿ ಸಾವಿಗೆ ಕಾರಣರಾಗಿದ್ದರು. ಈ ಸಂಬಂಧ 2025ರ ಏ.28ರಂದು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಬಿಎನ್ಎಸ್ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಾಗಿತ್ತು. 

ಪ್ರಕರಣದಲ್ಲಿ ಸಚಿನ್, ದೀಕ್ಷಿತ್, ಮಂಜುನಾಥ್, ಸಾಯಿದೀಪ್, ಸಂತೋಷ್, ದೇಜುಯಾನೆ ದೇವದಾಸ್, ಅನಿಲ್ ಕುಡುಪು, ಧನುಷ್ ಕುಡುಪು ಕಟ್ಟೆ, ನಿತೇಶ್, ಶ್ರೀದತ್ತ ಸೇರಿ 20 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಅವರಲ್ಲಿ ಬಹುತೇಕರು ಜಾಮೀನು ಪಡೆದು ಹೊರಬಂದಿದ್ದರು. ಇದನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ, ಜಾಮೀನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು. 

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.

Leave a Reply

Your email address will not be published. Required fields are marked *