ಕಾರ್ಮೆಲ್ ಕಾಲೇಜು ಬಿ.ಸಿ. ರೋಡ್ ವಿದ್ಯಾರ್ಥಿಗಳಿಂದ ಕಬಡ್ಡಿಯಲ್ಲಿ ಸತತ ಸಾಧನೆ: ಮೂವರು ಕ್ರೀಡಾಪಟುಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಬಿ.ಸಿ. ರೋಡ್:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಾರೀರಿಕ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪಿಯುಸಿ ವಿಭಾಗದ ತಾಲೂಕು ಮಟ್ಟದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಬಿ.ಸಿ. ರೋಡ್‌ನ ಕಾರ್ಮೆಲ್ ಕಾಲೇಜ್ ವಿದ್ಯಾರ್ಥಿಗಳು ಭರ್ಜರಿ ಪ್ರದರ್ಶನ ನೀಡಿ ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯಾಟದಲ್ಲಿ ತಮ್ಮ ಅತ್ಯುತ್ತಮ ಸಾಂಘಿಕ ಆಟದ ಮೂಲಕ ಗಮನ ಸೆಳೆದ ಸಂಸ್ಥೆಯ ಮೂವರು ವಿದ್ಯಾರ್ಥಿಗಳಾದ ಅಯಾಜ್ ಬೋಳಂಗಡಿ, ರಿಹಾಬ್ ಬಿ.ಸಿ. ರೋಡ್ ಮತ್ತು ಅರ್ಮಾನ್ ಆಲಡ್ಕ ಅವರು ಜಿಲ್ಲಾ ಮಟ್ಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.
ಕಾಲೇಜಿಗೆ ಹಾಗೂ ತಾಲೂಕಿಗೆ ಕೀರ್ತಿ ತಂದ ಕ್ರೀಡಾಪಟುಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ, ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳು ಮುಂಬರುವ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲಿ ಹಾಗೂ ಅವರ ಮುಂದಿನ ಶೈಕ್ಷಣಿಕ ಮತ್ತು ಕ್ರೀಡಾ ಭವಿಷ್ಯವು ಇನ್ನಷ್ಟು ಉಜ್ವಲವಾಗಲಿ ಎಂದು ಈ ಸಂದರ್ಭದಲ್ಲಿ ಹಾರೈಸಲಾಗಿದೆ.



